ಫಿಲ್ಟರ್ ಬೆಡ್ ಪರಿಶೀಲಿಸಿದ ಶಾಸಕ
ಕ.ಪ್ರ.ವಾರ್ತೆ ಶಹಾಪುರ ಜು.9
ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ನೀರು ಸಂಗ್ರಹಣಾ ಫಿಲ್ಟರ್ ಬೆಡ್ ಕೆರೆ ಖಾಲಿ ಆಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಗುರುಪಾಟೀಲ ಸೂಚಿಸಿದರು.
ನೀರು ಸಂಗ್ರಹಣಾ ಕೆರೆಯನ್ನು ಪರಿಶೀಲಿಸಿದ ಅವರು, ಕಾಲುವೆ ನೀರು ಬರುವವರೆಗೂ ಕೈಕಟ್ಟಿ ಕೂಡದೇ, ಸ್ಥಳೀಯ ಪುರಸಭೆ ಅಧಿಕಾರಿಗಳು, ನೀರು ನಿರ್ವಹಣೆಯ ತಾಂತ್ರಿಕ ವಿಭಾಗದವರು ಕ್ರಿಯಾಶೀಲರಾಗಿ ಸಾಧ್ಯವಾದಷ್ಟೂ ಕ್ರಮ ಕೈಗೊಂಡು ನೀರು ಪೂರೈಸಲು ಮುಂದಾಗಬೇಕು ಎಂದು ಸೂಚಿಸಿದರು.
ಕೊಳವೆ ಬಾವಿಗೆ ಅನುದಾನ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ತೊಂದರೆಯಿದ್ದು, ಸೂಕ್ತವಾಗಿ ಪರಿಶೀಲಿಸಿ, ಅವಶ್ಯಕತೆಯಿದ್ದಲ್ಲಿ ಕೊಳವೆ ಬಾವಿ ಕೊರೆಯಲು ಅನುದಾನ ಲಭ್ಯವಿದ್ದು, ತಕ್ಷಣವೇ ಕಾರ್ಯಪ್ರವರ್ತಕರಾಗಬೇಕು. ಈಗಾಗಲೇ ಹಳೆಯ ಕಾಲದ ನೀರು ಪೂರೈಸುವ ಬಾವಿಗಳಿವೆ. ಅವುಗಳನ್ನು ಸ್ವಚ್ಛಗೊಳಿಸಿ ನೀರು ಸರಬರಾಜು ಮಾಡಬೇಕು. ಅಲ್ಲಲ್ಲಿ ಕೆಟ್ಟ ಮೋಟಾರುಗಳನ್ನು ದುರಸ್ತಿಗೊಳಿಸಿ, ಕಾಲುವೆ ನೀರು ಬರುವವರೆಗೂ, ಪಟ್ಟಣದ ಜನತೆಗೆ ನೀರಿನ ತೊಂದರೆಯಾಗದಂತೆ ಎರಡು ದಿನಕ್ಕೊಮ್ಮೆ ಸಮಗ್ರವಾಗಿ ನೀರು ಪೂರೈಸಬೇಕು. ಈ ಕುರಿತು ನಿರ್ಲಕ್ಷ್ಯ ಸಲ್ಲದು ಎಂದು ಗುರು ಪಾಟೀಲ ಎಚ್ಚರಿಸಿದರು.
ಈಗಾಗಲೇ ಕುಡಿಯುವ ನೀರಿಗಾಗಿ ತೊಂದರೆಯಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕಾಲುವೆಗೆ ನೀರು ಹರಿಸುವಂತೆ ಕೆಬಿಜೆಎನ್ನೆಲ್ ಎಂಡಿಯವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಡ್ಯಾಂಗಳಲ್ಲಿ ಹಂತ ಹಂತವಾಗಿ ನೀರು ಸಂಗ್ರಹವಾಗುತ್ತಿದ್ದು, ಶೀಘ್ರದಲ್ಲಿ ಕಾಲುವೆಗೆ ನೀರು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಫಿಲ್ಟರ್ ಬೆಡ್ಗೆ ಕಾಯಕಲ್ಪ: ಈಗಾಗಲೇ 50 ಸಾವಿರ ಜನಸಂಖ್ಯೆಗೆ ಅನುಗುಣವಾಗಿರುವ ಫಿಲ್ಟರ್ಬೆಡ್ ಕೇಂದ್ರದಲ್ಲಿ ಹಲವು ಸೌಲಭ್ಯಗಳ ಕೊರತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಕೆರೆಯ ಸುತ್ತ ಸೂಕ್ತ ರಕ್ಷಣೆ, ನೀರು ಫಿಲ್ಟರ್ ಆಗಲು ಸೂಕ್ತಕ್ರಮ, ಸುತ್ತ ಶುಚಿತ್ವ ಬಹುಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಜಾಗೃತಿ ವಹಿಸಿ ಯಾವುದೇ ಕಾರಣಕ್ಕೂ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಸಹಾಯಕ ಆಯುಕ್ತ ಬಿ.ಪಿ.ವಿಜಯ, ತಹಸೀಲ್ದಾರ ಕೆ.ಎಲ್.ಭಜಂತ್ರಿ, ಮುಖ್ಯಾಧಿಕಾರಿ ಎಜಾಜ ಹುಸೇನ್, ಮುಖಂಡ ಮಲ್ಲಣ್ಣಮಡ್ಡಿ, ವಸಂತ ಸುರಪುರ, ಜೆ.ಇ. ಪುರುಷೋತ್ತಮ ಇತರರು ಇದ್ದರು.