ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಸಿಯೂಟದಲ್ಲಿ ಹಲ್ಲಿ, ವಿದ್ಯಾರ್ಥಿಗಳು ಅಸ್ವಸ್ಥ

Lingaraj Badiger
Updated On : 10 Jul 2013, 11:07 am

ಹುಣಸಗಿ/ಕೆಂಭಾವಿ: ಸಮೀಪದ ಸದಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡ ಘಟನೆ ಜರುಗಿದೆ. ಅವರನ್ನು ತಕ್ಷಣ ಹುಣಸಗಿ ಹಾಗೂ ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಶಾಲೆಗೆ ಮಂಗಳವಾರ ಹಾಜರಾಗಿದ್ದ 121 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ಅಡುಗೆ ಬಡಿಸಲಾಯಿತು. ಆ ಸಂದರ್ಭಧಲ್ಲಿ ಒಬ್ಬ ವಿದ್ಯಾರ್ಥಿಗೆ ಹಲ್ಲಿಯ ಬಾಲ ಅನ್ನದಲ್ಲಿ ಸಿಕ್ಕಿತು. ನಂತರ ಮತ್ತೊಬ್ಬ ವಿದ್ಯಾರ್ಥಿಗೆ ಹಲ್ಲಿಯ ಮುಖದ ಭಾಗ ಕಂಡಿತು. ತಕ್ಷಣ ವಿಷಯವನ್ನು ಶಿಕ್ಷಕರಿಗೆ ತಿಳಿಸಿದರು. ಆ ಸಂದರ್ಭದಲ್ಲಿ ನಾಲ್ಕಾರು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದರು. ಆಗ ಶಿಕ್ಷಕರು ಯಾರೂ ಊಟ ಮಾಡಬಾರದು ಎಂದು ತಿಳಿಸಿ, ತಕ್ಷಣ ಎಲ್ಲಾ ವಿದ್ಯಾರ್ಥಿಗಳನ್ನು ಹುಣಸಗಿ ಹಾಗೂ ಕೆಂಭಾವಿ ಆಸ್ಪತ್ರೆಗೆ ಕಳುಹಿಸಿದರು.
ಆಸ್ಪತ್ರೆಗೆ: ತೀವ್ರ ಅಸ್ವಸ್ಥಗೊಂಡಿದ್ದ ಅಭಿಷೇಕ, ಸಾಲಿಯಾ, ಅಲಿಯಾ, ಮಕ್ಕಾಬಿ, ರವಿಚಂದ್ರ, ಶ್ರೀದೇವಿ, ಜಯಶ್ರೀ ಸೇರಿದಂತೆ ಅನೇಕ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ 108 ವಾಹನದ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಯಿತು. ವೈದ್ಯಾಧಿಕಾರಿ ಎಸ್.ಬಿ. ಪಾಟೀಲ ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷಿಸಿದರು. ಎಲ್ಲಾ ವಿದ್ಯಾರ್ಥಿಗಳು ಸದ್ಯ ಆರೋಗ್ಯವಾಗಿದ್ದಾರೆ. ಯಾವುದೇ ಅಪಾಯವಿಲ್ಲ, ಇಬ್ಬರು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಮಾತ್ರ ಸ್ವಲ್ಪ ಏರುಪೇರು ಕಂಡುಬಂದಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ಎಸ್.ಬಿ. ಪಾಟೀಲ ತಿಳಿಸಿದ್ದಾರೆ.
ದೌಡಾಯಿಸಿದ ಶಾಸಕ: ಸುದ್ದಿ ತಿಳಿದ ತಕ್ಷಣ ಆಪ್ತರೊಡನೆ ಹುಣಸಗಿ ಆಸ್ಪತ್ರೆಗೆ ಆಗಮಿಸಿದ ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ, ವಿದ್ಯಾರ್ಥಿಗಳ ಯೋಗಕ್ಷೇವು ವಿಚಾರಿಸಿದರು.
 ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಲಭ್ಯತೆ ಕುರಿತು ವಿಚಾರಿಸಿದರು. ಸದ್ಯ ಎಲ್ಲಾ ವಿದ್ಯಾರ್ಥಿಗಳು ಕ್ಷೇಮವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
  ಪ್ರಮುಖರಾದ ರಾಜಶೇಖರಗೌಡ ಪಾಟೀಲ್, ಸೂಲಪ್ಪ ಕಮತಗಿ, ವಿಠ್ಠಲ್ ಯಾದವ, ಸುರೇಶ ನೀರಲಗಿ ಇತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement