ಸಾಧನೆ ಸಾಧಕನ ಸೊತ್ತು: ಮಾಲಿಪಾಟೀಲ್
ಕನ್ನಡಪ್ರಭ ವಾರ್ತೆ, ಸೇಡಂ, ಜು.9
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಎಂಬುದು ಕಷ್ಟದ ಕೆಲಸ. ಸಾಧನೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ ಎಂದು ಜ್ಞಾನಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಜ್ಞಾನಜ್ಯೋತಿ ಐಟಿಐ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ 2011-13ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶಿಸ್ತು, ಪ್ರಾಮಾಣಿಕತೆ, ಸಮಯ ಪ್ರಜ್ಞೆಗಳನ್ನು ಜೀವನದ ಮೂಲಮಂತ್ರವಾಗಿರಿಸಿಕೊಂಡ ವ್ಯಕ್ತಿ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಕರೆ ನೀಡಿದರು.
ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಮಾತನಾಡಿ, ಶಿಕ್ಷಣ ಬರೀ ಉದ್ಯೋಗಕ್ಕೆ ಸೀಮಿತವಾಗದೆ ಜೀವನದ ಮೌಲ್ಯಗಳನ್ನು ತಿಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸಂಸ್ಥೆ ಕಳೆದ 14 ವರ್ಷಗಳಿಂದ ಸಂಸ್ಕಾರಭರಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾರಂಭದಲ್ಲಿ ನಾಟಕಕಾರ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಪ್ರಾಚಾರ್ಯ ದುಂಡಪ್ಪ ಹಿಪ್ಪರಗಿ, ಆಡಳಿತಾಧಿಕಾರಿ ರೇವಣಸಿದ್ದಯ್ಯ ಹಿರೇಮಠ, ಸಾಯಿ ಐಟಿಐ ಅಧ್ಯಕ್ಷ ಮಹೇಶ, ಪ್ರಾಚಾರ್ಯ ಮೌನೇಶ, ಉಪನ್ಯಾಸಕರಾದ ಅಂಬಿಕೇಶ್ವರ ಹೊನ್ಕೇರಿ, ಮಹೇಶ ಪಾಟೀಲ್, ಮಹಾಂತೇಶ ತೆಂಗಳಿ, ನರಸಪ್ಪ ಸಣ್ಣಳ್ಳಿ, ಮಂಜುನಾಥ ಬಿರಾದಾರ, ಶ್ರೀನಿವಾಸ ದಂಡಗುಳಕರ್, ನಾರಾಯಣ ಹೊಟ್ಟಿ, ಸಿದ್ರಾಮಪ್ಪ, ಹೇಮಾವತಿ, ದೇವಿಂದ್ರಮ್ಮ ಪವಾಡಶೆಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಿದ್ಧಾರ್ಥ ಪ್ರಾರ್ಥಿಸಿದರು. ಜಗದೀಶ ಚವ್ಹಾಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭೀಮಾಶಂಕರ ವಂದಿಸಿದರು.