ಕನಿಷ್ಠ ಕೂಲಿಗೆ ಒತ್ತಾಯ
ಕ.ಪ್ರ. ವಾರ್ತೆ ಯಾದಗಿರಿ ಜು.10
ಶಿಶು ಅಭಿವೃದ್ಧಿ ಯೋಜನೆ ಖಾಸಗೀಕರಣ ವಿರೋಧಿಸಿ ಹಾಗೂ ಕಾಯಮಾತಿ, ಕನಿಷ್ಠ ಕೂಲಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು. ನಗರದ ಸುಭಾಷ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಕಾರ್ಯಕರ್ತೆಯರು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಸೌಲಭ್ಯ ಅಲಭ್ಯ: ಸಂಘದ ಜಿಲ್ಲಾಧ್ಯಕ್ಷೆ ಸುರೇಖಾ ಕುಲಕರ್ಣಿ ಮಾತನಾಡಿ, ಐಸಿಡಿಎಸ್ ಯೋಜನೆಗೆ ಸರ್ಕಾರ ಅಗತ್ಯವಿರುವ ಅನುದಾನವನ್ನು ಕೊಡದೇ ಬಲಿಷ್ಠಗೊಳಿಸುವ ಹೆಸರಿನಲ್ಲಿ ಯೋಜನೆಯ ಕತ್ತು ಹಿಸುಕಲು ಹೊರಟಿದೆ. ಅಪೌಷ್ಟಿಕತೆ ರಾಷ್ಟ್ರೀಯ ಅವಮಾನ ಎಂದು ಹೇಳುತ್ತಲೇ ಯೋಜನೆಯನ್ನು ಖಾಸಗೀಕರಣಗೊಳಿಸುವ ಸಂಚು ನಡೆದಿದೆ. ದೇಶದಲ್ಲಿನ ಅರ್ಧದಷ್ಟು ಮಕ್ಕಳು, ಗರ್ಭಿಣಿಯರ ಸರ್ವಾಂಗೀಣ ಆರೋಗ್ಯ ಸುಧಾರಿಸುವತ್ತ ಯೋಜನೆ ಗಣನೀಯ ಸಾಧನೆ ಮಾಡುತ್ತಿದ್ದರೂ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸೌಲಭ್ಯ ಕೊಡಲು ಹಿಂಜರಿಯುತ್ತಿದೆ ಎಂದು ಆರೋಪಿಸಿದರು.
ಗೌರವ ವೇತನ ಹೆಚ್ಚಿಸಿ: ಐಸಿಡಿಎಸ್ ಕ್ರಮಬದ್ಧಗೊಳಿಸಿ ಅದನ್ನು ಇಲಾಖೆಯನ್ನಾಗಿ ಮಾಡಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಶಿಶು ವಿಹಾರವನ್ನಾಗಿಸಬೇಕು. ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಂಗನವಾಡಿ ಖಾಸಗೀಕರಣ ಮಾಡಬಾರದು. ಅಂಗನವಾಡಿ ನೌಕರರನ್ನು ಹಾಗೂ ಸಹಾಯಕರನ್ನು ಸರ್ಕಾರದ 3 ಮ್ತು 4ನೇ ದರ್ಜೆ ನೌಕರರನ್ನಾಗಿ ಕ್ರಮಬದ್ಧಗೊಳಿಸಬೇಕು. ಅಲ್ಲಿಯವರೆಗೆ ಗೌರವ ವೇತನವನ್ನು ಹೆಚ್ಚಿಸಬೇಕು. ಕನಿಷ್ಠ ನಿವೃತ್ತಿ ವೇತನ, ಭವಿಷ್ಯ ನಿಧಿ ಇತ್ಯಾದಿ ಸಾಮಾಜಿಕ ಭದ್ರತೆಗಳು. ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿ ಪಕ್ಕಾ ಕಟ್ಟಡಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಅಂಗನವಾಡಿ ನೌಕರರು ಮತ್ತು ಸಹಾಯಕರಿಗೆ ಏಕಪ್ರಕಾರದ ಸೇವಾ ನಿಯಮಗಳನ್ನು ಮತ್ತು ಸ್ಪಷ್ಟ ಕೆಲಸವನ್ನಷ್ಟೇ ಒಪ್ಪಿಸಬೇಕು. ಯಾವುದೇ ಕಾರಣಕ್ಕೂ ಇದರ ಹೊರತಾದ ಕೆಲಸಗಳಿಗೆ ಅಂಗನವಾಡಿ ನೌಕರರನ್ನು ನಿಯೋಜಿಸಬಾರದು. ಶಾಲಾ ಸಿಬ್ಬಂದಿಗೆ ಇರುವ ರಜೆಯ ಸೌಲಭ್ಯವನ್ನು ಒದಗಿಸಬೇಕು. ನೇಮಕಾತಿಯಲ್ಲಿ ಅಂಗನವಾಡಿ ನೌಕರರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಆಗಮಿಸಿ, ನೌಕರರ ಬೇಡಿಕೆ ಆಲಿಸಿದರು. ಮನವಿ ಪತ್ರ ಸ್ವೀಕರಿಸಿ, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೀಕರ, ಬಂಗಾರೆಮ್ಮ ಅಣ್ಣಿಗೇರಿ ಇತರರು ಇದ್ದರು.