ಗ್ರಾಮ ಲೆಕ್ಕಾಧಿಕಾರಿ ಗುರುಮೂರ್ತಿ ಅಮಾನತು
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.10
ನಗರದಲ್ಲಿ ಜುಲೈ 2ರಂದು ನಡೆದಿದ್ದ ಮರಳು ಅಕ್ರಮ ಸಾಗಣೆಯಲ್ಲಿ ಶಾಮೀಲಾದ ಆರೋಪದ ಮೇರೆಗೆ ಗುಲ್ಬರ್ಗ ಸ್ಥಾನಿಕ ಗ್ರಾಮ ಲೆಕ್ಕಾಧಿಕಾರಿ ಗುರುಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಆದೇಶ ಹೊರಡಿಸಿದ್ದಾರೆ.
ನಾಗನಹಳ್ಳಿ ರೇಲ್ವೆ ಮೇಲ್ಸೇತುವೆ ಸಮೀಪ ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್ ಮೇಲೆ ಮರಳು ಸಾಗಣೆಯ ಲಾರಿ ಮತ್ತು ಟಿಪ್ಪರ್ ಮಾಲೀಕರು ಅನುಚಿತವಾಗಿ ವರ್ತಿಸಿದ ಪ್ರಕರಣದ ಬಗ್ಗೆ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರವಿಕಿರಣ ಒಂಟಿ ಮೂಲಕ ಜಿಲ್ಲಾಧಿಕಾರಿ ವಿಚಾರಣೆ ನಡೆಸಿದ್ದಾರೆ.
ಚಾಲಕ ತಪ್ಪೊಪ್ಪಿಗೆ: ಚಿಂಚೋಳಿಕರ್ ತಮ್ಮ ಮನೆಗೆ ಮರಳನ್ನು ಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಅವರ ವಿರುದ್ಧ ವಿಚಾರಣೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಟ್ರಕ್ ಮಾಲೀಕರು ಲಾರಿಯನ್ನು ತಡೆದು ತಹಸೀಲ್ದಾರ್ ಸಂಗಡ ಅನುಚಿತವಾಗಿ ವರ್ತಿಸಿದಾಗ, ಲಾರಿ ಚಾಲಕ ಪಂಡಿತಕುಮಾರ್ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರು ಪಂಡಿತಕುಮಾರ್ ಅವರನ್ನು ಪತ್ತೆ ಮಾಡಿ ಹಾಜರುಪಡಿಸಿದ್ದರು.
ಲಾರಿಯಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿ ಗುರುಮೂರ್ತಿ ಅವರನ್ನು ಕೂಡ ವಿಚಾರಣೆಗಾಗಿ ಕರೆಸಲಾಗಿತ್ತು. ಮರಳು ತುಂಬಿದ ಲಾರಿಯನ್ನು ಜೂನ್ 2ರಂದು ಸರ್ಕಾರಿ ಶೇಖರಣಾ ಕೇಂದ್ರಕ್ಕೆ(ಸ್ಟಾಕ್ ಯಾರ್ಡ್) ತೆಗೆದುಕೊಂಡು ಹೋಗುತ್ತಿದ್ದಾಗ ಟ್ರಕ್ನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವಂತೆ ಗುರುಮೂರ್ತಿ ತನಗೆ ಬಲವಂತ ಮಾಡಿದ. ಕೆಲ ನಿಮಿಷಗಳ ಬಳಿಕ ಮರಳು ಸಾಗಣೆ ಲಾರಿ ಮತ್ತು ಟಿಪ್ಪರ್ ಮಾಲೀಕರು ರಸ್ತೆಗೆ ಅಡ್ಡಲಾಗಿ ನಿಂತು ಲಾರಿಯನ್ನು ತಡೆದರು. ತಾನು ಭಯದಿಂದ ಅಲ್ಲಿಂದ ಪರಾರಿಯಾಗಿದ್ದಾಗಿ ವಿಚಾರಣೆ ವೇಳೆ ಪಂಡಿತಕುಮಾರ್ ಒಪ್ಪಿಕೊಂಡಿದ್ದಾನೆ.
ಜಿಲ್ಲಾಧಿಕಾರಿ ತಾಕೀತು: ಈ ಮಧ್ಯೆ ಲಾರಿಯನ್ನು ಬೇರೆ ಕಡೆಗೆ ಹೋಗುವಂತೆ ಲಾರಿ ಚಾಲಕ ತಾನು ಒತ್ತಾಯಿಸಿರುವುದನ್ನು ಗುರುಮೂರ್ತಿ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ. ಆದರೆ, ಲಾರಿ ಬೇರೆ ಕಡೆಗೆ ಹೊರಟ ಕೆಲವೇ ಕ್ಷಣಗಳಲ್ಲಿಯೇ ಮರಳು ಸಾಗಣೆ ಮತ್ತು ಟಿಪ್ಪರ್ ಮಾಲೀಕರು ಸ್ಥಳಕ್ಕೆ ಹೇಗೆ ಬಂದರು ಎಂಬುವುದು ಯಕ್ಷಪ್ರಶ್ನೆಯಾಗಿದೆ.
ಲಾರಿಯನ್ನು ನಾಗನಹಳ್ಳಿ ಮೇಲ್ಸೇತುವೆ ಬಳಿ ತಡೆಯಲಾಗಿದೆ ಎಂಬ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾಗಿ ತಹಸೀಲ್ದಾರ್ ಚಿಂಚೋಳಿಕರ್ ತಿಳಿಸಿದ್ದಾರೆ.
ಗುರುಮೂರ್ತಿ, ಮರಳು ಸಾಗಣೆ ಲಾರಿ ಮತ್ತು ಟಿಪ್ಪರ್ ಮಾಲೀಕರ ನಡುವಣ ಸಂಭವನೀಯ ಸಖ್ಯದ ಬಗ್ಗೆ ಕೂಡ ವಿಚಾರಣಾಧಿಕಾರಿ ರವಿಕಿರಣ ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವರದಿ ಸಲ್ಲಿಸುವಂತೆ ಪ್ರಕರಣದ ವಿಚಾರಣಾಧಿಕಾರಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.