ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಡವರಿಗೆ ಅನ್ನಭಾಗ್ಯ ಯೋಜನೆ ಚಾಲನೆ

Lingaraj Badiger
Updated On : 11 Jul 2013, 10:57 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.10
ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ಅಕ್ಕಿ ವಿತರಿಸುವ ಪಡಿತರ ನ್ಯಾಯಬೆಲೆ ಅಂಗಡಿಯ ವಿತರಕರು ಗ್ರಾಹಕರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ಅಕ್ಕಿ ವಿತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಸೂಚಿಸಿದರು.
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ನಗರದ ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ರು.ಗೆ ಒಂದು ಕೆಜಿಯಂತೆ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಫಲಾನುಭವಿಗಳ ಬೆರಳು ಗುರುತು: ಸರ್ಕಾರ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿ ಬಡವರಿಗೆ ಒಂದು ರು.ಗೆ ಕೆಜಿ ಅಕ್ಕಿಯಂತೆ 30ಕೆಜಿ ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ವಿತರಣೆಯಲ್ಲಿ ಎಲ್ಲೂ ಅನ್ಯಾಯವಾಗಬಾರದೆಂಬ ಉದ್ದೇಶದಿಂದ (ಇಡಬ್ಲ್ಯೂಪಿಒಎಸ್‌ಎಂ-ಎಲೆಕ್ಟ್ರಾನಿಕ್ ವೇಯಿಂಗ್ ಪಾಯಿಂಟ್ ಆಫ್ ಸೇಲ್ ಮಷಿನ್) ಇ-ಪಡಿತರ ಯಂತ್ರದಲ್ಲಿ ಫಲಾನುಭವಿಗಳ ಬೆರಳು ಗುರುತು ಪಡೆದು ವಿತರಣೆ ಮಾಡುವ ನೂತನ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.
ಹೊಸದಾಗಿ ಅಳವಡಿಸಲಾದ ಈ ವ್ಯವಸ್ಥೆಯ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಆ ಬಗ್ಗೆ ವಿತರಕರಿಗೂ ಹೆಚ್ಚಿನ ಮಾಹಿತಿ, ಅಗತ್ಯಬಿದ್ದರೆ ಆಹಾರ, ನಾಗರಿಕರ ಸರಬರಾಜು ಇಲಾಖೆಯ ಅಧಿಕಾರಿಗಳಿಂದ ಪಡೆಯಬೇಕು. ಈ ಬಗ್ಗೆ ವಿತರಕರು ಹೆಚ್ಚು ನಿಗಾ ವಹಿಸಬೇಕೆಂದು ಸಚಿವರು ಹೇಳಿದರು.
ಕೇಂದ್ರ ಸರ್ಕಾರ ದೇಶದ ಮೂರನೇ ಎರಡರಷ್ಟು ಜನರಿಗೆ ಆಹಾರ ಭದ್ರತೆಯನ್ನೊದಗಿಸಲು ಆಹಾರ ಭದ್ರತಾ ಮಸೂದೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಯಶಸ್ವಿಗೆ ಜನರ ಸಹಭಾಗಿತ್ವ ಅಗತ್ಯ ಎಂದರು.
ಜಿಲ್ಲೆಯಲ್ಲಿ ಇದರ ಯಶಸ್ವಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅರ್ಹರು ಈ ಯೋಜನೆಯ ಲಾಭ ಪಡೆದು ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಬೇಕೆಂದು ಕರೆ ನೀಡಿದರು.
ಜಿಲ್ಲೆಯಲ್ಲಿ 4,04,887 ಫಲಾನುಭವಿಗಳು: ಜಿಲ್ಲೆಯಲ್ಲಿ ಒಟ್ಟು 4,04,887 ಬಿಪಿಎಲ್ ಪಡಿತರ ಚೀಟಿಗಳಿದ್ದು, ಈ ಪಡಿತರ ಚೀಟಿಗಳಿಗೆ ಜುಲೈ ಮಾಹೆಯಿಂದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಏಕ ಸದಸ್ಯ ಕುಟುಂಬಕ್ಕೆ 10 ಕೆಜಿ, ದ್ವಿಸದಸ್ಯ ಕುಟುಂಬಕ್ಕೆ 20 ಕೆಜಿ ಹಾಗೂ ಮೂರು ಮತ್ತು ಹೆಚ್ಚಿನ ಸದಸ್ಯ ಕುಟುಂಬದ ಪಡಿತರ ಚೀಟಿಗಳಿಗೆ 30 ಕೆಜಿಯಂತೆ ಅಕ್ಕಿಯನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 988 ನ್ಯಾಯಬೆಲೆ ಅಂಗಡಿಗಳಿದ್ದು, ಸಾರ್ವಜನಿಕ ವಿತರಣೆಯಲ್ಲಿ ಕಾರ್ಡುದಾರರಿಗೆ ಸಮರ್ಪಕವಾಗಿ ಪಡಿತರ ಪದಾರ್ಥಗಳನ್ನು ವಿತರಿಸುವ ಉದ್ದೇಶವಾಗಿದೆ.
ಅಧಿಕಾರಿಗಳು ಸಮರ್ಪಕವಾಗಿ ಮುಟ್ಟಿಸಬೇಕು: ಗುಲ್ಬರ್ಗ ಗ್ರಾಮಾಂತರ ಶಾಸಕರಾದ ಜಿ. ರಾಮಕೃಷ್ಣ ಮಾತನಾಡಿ, ಒಂದು ಕುಟುಂಬ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟು ಅಕ್ಕಿಯನ್ನು ಸರ್ಕಾರ ನೀಡುತ್ತಿದೆ. ಜನ ನೆಮ್ಮದಿಯಿಂದ ಬದುಕಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಮುಟ್ಟಿಸುವ ಹೊಣೆ ಅಧಿಕಾರಿಗಳದ್ದು ಎಂದರು.
ಶಾಸಕರಾದ ಡಾ. ಉಮೇಶ ಜಾಧವ, ವಿಧಾನಪರಿಷತ್ ಸದಸ್ಯರಾದ ಅಲ್ಲಂಪ್ರಭು ಪಾಟೀಲ್ ಹಾಗೂ ಅಮರನಾಥ ಪಾಟೀಲ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಹಾಗೂ ಜಿಪಂ ಸಿಇಒ ಪಲ್ಲವಿ ಆಕುರಾತಿ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಎ.ಟಿ. ಜಯಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಪಿಎಲ್ ಸೇರಿದ ಫಲಾನುಭವಿಗಳಿಂದ ಪಡಿತರ ಯಂತ್ರದಲ್ಲಿ ಬೆರಳಚ್ಚು ಪಡೆದು ಅಕ್ಕಿಯನ್ನು ವಿತರಿಸಲಾಯಿತು.
ಅನ್ನಭಾಗ್ಯ ಯೋಜನೆಯ ಮುಖ್ಯಾಂಶಗಳು: ಗುಲ್ಬರ್ಗ ಜಿಲ್ಲೆಯಲ್ಲಿ 7 ತಾಲೂಕುಗಳು ಹಾಗೂ ಎರಡು ಅನೌಪಚಾರಿಕ ಪಡಿತರ ಪ್ರದೇಶಗಳನ್ನು ಹೊಂದಿದೆ. 2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 25,66,326 ಜನಸಂಖ್ಯೆ ಇದ್ದು, ಅದರಲ್ಲಿ 4,65,245 ಕುಟುಂಬಗಳಿರುತ್ತವೆ. ಜಿಲ್ಲೆಯಲ್ಲಿ 63,769 ಅಂತ್ಯೋದಯ ಪಡಿತರ ಚೀಟಿಗಳಿದ್ದು, ಪ್ರತಿ ಪಡಿತರ ಚೀಟಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ ವಿತರಿಸಲಾಗುತ್ತಿದೆ. ಸದರಿ ಪಡಿತರ ಚೀಟಿಗಳಿಗೆ ಜುಲೈನಿಂದ ಅಕ್ಕಿಯನ್ನು ಪ್ರತಿ ಕೆಜಿಗೆ ಒಂದು ರು.ರಂತೆ ಹಾಗೂ ಗೋಧಿಯನ್ನು ಎರಡು ರು.ಗೆ ಒಂದು ಕೆಜಿಯಂತೆ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಪಡಿತರ ಚೀಟಿಗಳನ್ನು ವಿತರಿಸಲಾಗಿದ್ದರೂ, ಹೊಸದಾಗಿ ಪಡಿತರ ಚೀಟಿಗಳನ್ನು ಕೋರಿ ಇದುವರೆಗೆ 69439 ಅರ್ಜಿಗಳು ಸ್ವೀಕೃತವಾಗಿರುತ್ತವೆ. ಹೊಸದಾಗಿ ಪಡಿತರ ಚೀಟಿ ಕೋರಿ ಬಂದಿರುವ ಅರ್ಜಿಗಳನ್ನು ಆದ್ಯತೆ ಮೇಲೆ ಪರಿಶೀಲನೆ ಮಾಡಿ ವಿಳಂಬವಿಲ್ಲದೆ ಅರ್ಹರಿಗೆ ಹೊಸ ಪಡಿತರ ಚೀಟಿಗಳನ್ನು ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಕ್ರಮ ವಹಿಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement