ಅರ್ಹರಿಗೆ ಅನ್ನಭಾಗ್ಯ ದೊರಕಲಿ
ಕ.ಪ್ರ. ವಾರ್ತೆ ಯಾದಗಿರಿ ಜು.10
ಅನ್ನ ಭಾಗ್ಯ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ರು. 1ಗೆ ಕೆಜಿ ಅಕ್ಕಿ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
ಚಾಲನೆ: ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ರು. 1ಗೆ 1 ಕೆಜಿ ಅಕ್ಕಿ ವಿತರಿಸುವ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿದರು.
ಸರ್ಕಾರವು ಈ ಯೋಜನೆಯಡಿ 1 ರು.ಗೆ 1 ಕೆಜಿಯಂತೆ ಗರಿಷ್ಠ 30 ಕೆಜಿ ಅಕ್ಕಿಯನ್ನು ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಕಡು ಬಡ ಜನರಿಗಾಗಿ ಜಾರಿಗೊಳಿಸಿದ್ದು, ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದೆ. ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದ್ದು, ಅವರಿಗೆ ಯೋಜನೆಯ ಲಾಭ ದೊರಯಬೇಕು. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ನಿಗಾ ಇಡಬೇಕು ಎಂದು ಸೂಚಿಸಿದರು.
ಯೋಜನೆಯಿಂದ ಹೊರೆ: ರಾಜ್ಯದಲ್ಲಿ ಸುಮಾರು 98 ಲಕ್ಷ ಬಿಪಿಎಲ್ ಕಾರ್ಡುದಾರರು ಇದ್ದಾರೆ. ಪ್ರತಿ ತಿಂಗಳು 2.84 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಈ ಯೋಜನೆಗೆ ಬೇಕಾಗುತ್ತದೆ. ಈ ಯೋಜನೆ ಜಾರಿಯಿಂದ ಸರ್ಕಾರದ ಮೇಲೆ ರು. 4800 ಕೋಟಿ
ಹೊರೆಯಾಗಲಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರದ ನಾಯಕರ ಆಸಕ್ತಿಯ ಫಲವಾಗಿ ಮಹತ್ವವಾದ ಈ ಅನ್ನಭಾಗ್ಯ ಯೋಜನೆ ರಾಜ್ಯಾದ್ಯಂತ ಜಾರಿಗೊಂಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಮಾತನಾಡಿ, ಜಿಲ್ಲೆಯಲ್ಲಿ 1,53,551 ಬಿಪಿಎಲ್ ಫಲಾನುಭವಿಗಳಿದ್ದಾರೆ. ಹೊಸದಾಗಿ 17 ಸಾವಿರ ಅರ್ಜಿಗಳು ಅನ್ಲೈನ್ ಮೂಲಕ ಬಂದಿವೆ. ಜಿಲ್ಲೆಗೆ ಪ್ರತಿ ತಿಂಗಳು 53,470 ಕ್ವಿಂಟಲ್ ಅಕ್ಕಿ, 1800 ಕ್ವಿಂಟಲ್ ಗೋದಿ, 2 ಸಾವಿರ ಕ್ವಿಂಟಲ್ ಸಕ್ಕರೆ ಪೂರೈಕೆಯಾಗಲಿದೆ. ಪಡಿತರ ಆಹಾರ ಧಾನ್ಯಕ್ಕಾಗಿ ಜಿಲ್ಲೆಗೆ ಪ್ರತಿ ತಿಂಗಳು ರು. 3.51 ಕೋಟಿ ಬೇಕಾಗುತ್ತದೆ. ಬಡ ಹಾಗೂ ಅರ್ಹರಿಗೆ ಯೋಜನೆಯ ಲಾಭ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಶಾಸಕ ಗುರುಪಾಟೀಲ್ ಶಿರವಾಳ, ಜಿಪಂ ಅಧ್ಯಕ್ಷೆ ಮರೆಮ್ಮ ಶ್ಯಾಣೆನೋರ್, ಉಪಾಧ್ಯಾಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಪಂ ಸಿಇಒ ಎಸ್.ಎ. ಜಿಲಾನಿ, ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ ಇತರರು ಇದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಟಿ. ಮಹ್ಮದ್ ಸ್ವಾಗತಿಸಿದರು. ಸಾಹೇಬಗೌಡ ಬಿರಾದಾರ ನಿರೂಪಿಸಿ, ವಂದಿಸಿದರು.
ಕುಡಿವ ನೀರು ಪೂರೈಕೆ ಘಟಕಕ್ಕೆ ಚಾಲನೆ
ಯಾದಗಿರಿ: ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದ ಬಡ ಜನರಿಗಾಗಿ ಕೇವಲ 15 ದಿನದೊಳಗೆ ಆರ್ಸೆನಿಕ್ ನೀರನ್ನು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸುವ ಮೂಲಕ ಬಡ ಜನರಿಗಾಗಿ ಸರ್ಕಾರಕ್ಕೆ ಇರುವ ಕಳಕಳಿ ಮತ್ತು ನೆರವು ನೀಡುವ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಜವಳಿ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
ಕಿರದಳ್ಳಿ ತಾಂಡಾದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿಗೆ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ವಾಟರ್ ಲೈಫ್ ಇಂಡಿಯಾ ಸಹಯೋಗದಿಂದ ಸ್ಥಾಪಿಸಲಾದ ಆರ್ಸೆನಿಕ್ ಅಂಶ ತೆಗೆದು ಶುದ್ಧ ನೀರು ಪೂರೈಕೆ ಘಟಕವನ್ನು ಉದ್ಫಾಟಿಸಿದರು.
ಶುದ್ಧ ನೀರು: ಸಿದ್ದರಾಮಯ್ಯ ಇತ್ತೀಚಿಗೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ಸಭೆ ನಡೆಸಿ ಆರ್ಸೆನಿಕ್ಯುಕ್ತ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಗಳಲ್ಲಿ ತಕ್ಷಣ ಶುದ್ಧ ನೀರು ಪೂರೈಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈಗ ನೀರಿನ ಘಟಕವನ್ನು ಸ್ಥಾಪಿಸಿರುವುದು ನೆಮ್ಮದಿ ತಂದಿದೆ ಎಂದರು.