ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಳ: ಯುಟಿಯುಸಿ ಸ್ವಾಗತ
ಯಾದಗಿರಿ: ಆಯವ್ಯಯವನ್ನು ಮಂಡಿಸಿರುವ ಸಿಎಂ ಸಿದ್ಧರಾಮಯ್ಯ ಅವರು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನದ ಜತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹಧನ ಘೋಷಣೆ ಮಾಡಿರುವುದನ್ನು ಆಲ್ ಇಂಡಿಯಾ ಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಸಮಿತಿಯು ಸ್ವಾಗತಿಸಿದೆ.ಈ ಕುರಿತು ಹೇಳಿಕೆ ನೀಡಿರುವ ಸಂಘಟನೆ ರಾಜ್ಯಾಧ್ಯಕ್ಷ ಕೆ.ಸೋಮಶೇಖರ, ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಸಂಘದ ರಾಜ್ಯ ಪದಾಧಿಕಾರಿಗಳ ನಿಯೋಗವು ಇತ್ತೀಚೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಆಶಾ ಕಾರ್ಯಕರ್ತೆಯರಿಗೆ ಬಜೆಟ್ನಲ್ಲಿ ಮಾಸಿಕ ವೇತನ ನಿಗದಿ ಪಡಿಸಬೇಕು ಎನ್ನುವ ಬೇಡಿಕೆ ಇಟ್ಟಿತ್ತು. ಈಗಿರುವ ಎಲ್ಲ ಕಾಂಪೋನೆಂಟ್ಗಳ ಹಣವನ್ನು ಹೆಚ್ಚಿಸಬೇಕು ಮತ್ತಿತರ ಸೌಕರ್ಯಗಳನ್ನು ನೀಡಬೇಕೆಂದು ಕೋರಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಸಚಿವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳು ನ್ಯಾಯಯುತವಾಗಿದ್ದು, ಈ ಕುರಿತು ಸೂಕ್ತ ನೆರವನ್ನು ಪ್ರಕಟಿಸುವ ಬರವಸೆಯನ್ನು ಅಂದು ನಿಯೋಗಕ್ಕೆ ನೀಡಿದ್ದರು. ಅಂತೆಯೇ ಈ ಪ್ರಕಟಣೆ ಹೊರಡಿಸಿರುವುದಕ್ಕೆ ಸಂಘವು ಸಂತಸ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಗೌರವಧನ ನಿಗದಿ ಮಾಡಿದಂತೆ ಹಾಗೂ ಸರ್ಕಾರದ ವಿವಿಧ ಉನ್ನತಾಧಿಕಾರ ಸಮಿತಿಗಳ ಶಿಫಾರಸುಗಳನ್ನು ಪರಿಶೀಲಿಸಿ ನಮ್ಮ ರಾಜ್ಯಲ್ಲಿಯೂ ಆಶಾ ಕಾರ್ಯಕರ್ತೆಯರಿಗೆ ಜೀವನ ಯೋಗ್ಯ ಮಾಸಿಕ ನಿಗದಿತ ಗೌರವಧನ ನಿಗದಿ ಮಾಡಿ ಜೀವನ ಭದ್ರತೆ ಒದಗಿಸಬೇಕಾಗಿದೆ. ಗಣನೀಯ ಸೇವೆಯನ್ನು ಪಡೆಯುತ್ತಿರುವ ಕಾರ್ಯಕರ್ತೆಯರನ್ನು ಕಾಯಂ ಮಾಡಿಕೊಂಡು ಇಲಾಖೆಯಲ್ಲಿ ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಬೇಕಾಗಿದೆ. ರಾಜ್ಯ ಸರ್ಕಾರ ಮುಂದೆ ಇಂತಹ ನಿರ್ದಾರ ತೆಗೆದುಕೊಂಡು ಆಶಾ ಕಾರ್ಯಕರ್ತೆಯರಿಗೆ ನ್ಯಾ ಒದಗಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.