ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟಿಸಿ ದುರಸ್ತಿ ನಿರ್ಲಕ್ಷ್ಯ: ರೈತರ ಆಕ್ರೋಶ

Vishwanath S
Updated On : 14 Jul 2013, 12:35 pm

ಆಳಂದ: ಮಾಡಿಯಾಳ ವ್ಯಾಪ್ತಿಯ ವಿದ್ಯುತ್ ಪರಿವರ್ತಕ (ಟ್ರಾನ್ಸಫಾರ್ಮರ್) ಕಳೆದೊಂದು ತಿಂಗಳ ಹಿಂದೆಯೇ ಸುಟ್ಟು, ಪಂಪಸೆಟ್ ಸ್ಥಗಿತಗೊಂಡಿದ್ದರೂ, ಈ ಸಂಬಂಧ ಜೆಸ್ಕಾಂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಈ ಭಾಗದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮಾಡಿಯಾಳ ಗ್ರಾಮದ ರೈತರ ಹೊಲಗದ್ದೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ವಿದ್ಯುತ್ ಪರಿವರ್ತಕ ಸುಟ್ಟು  ತಿಂಗಳಾದರೂ ದುರಸ್ತಿ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಈ ಕಡೆ ತಿರುಗಿ ನೋಡುತ್ತಿಲ್ಲ: ಪ್ರಸ್ತಕ ವರ್ಷದಲ್ಲಿ ಸಕಾಲಕ್ಕೆ ಮಳೆ ಬಾರದೆ ಕಂಗಾಲಾದ ರೈತರು ತಮ್ಮ ಬಾವಿಗಳಲ್ಲಿ ಇದ್ದ ಅಳಿದುಳಿದ ನೀರಿನಲ್ಲಿ ವಿವಿಧ ಬೆಳೆಗಳನ್ನು ರಕ್ಷಿಸಲು ಹೆಣಗಾಡುತ್ತಿರುವಾಗ ಜೆಸ್ಕಾಂ ಅಧಿಕಾರಗಳು ಈ ಕಡೆ ತಿರುಗಿ ನೋಡುತ್ತಿಲ್ಲ. ಈ ವಿದ್ಯುತ್ ಟಿಸಿ ಕೆಳಭಾಗದಲ್ಲಿ 50ಕ್ಕೂ ಹೆಚ್ಚು ರೈತರ ಪಂಪಸೆಟ್‌ಗಳಿವೆ. ಆದರೆ, ಇಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ ಸಾಮರ್ಥ್ಯ ಚಿಕ್ಕದಾಗಿದ್ದು, ಪಂಪಸೆಟ್‌ಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಅಲ್ಲದೆ, ಕಳೆದ 3 ತಿಂಗಳಲ್ಲಿ 4 ಬಾರಿ ಸುಟ್ಟಿದೆ. ಇದರಿಂದ ಹತಾಶರಾದ ರೈತರು ಹೆಚ್ಚಿನ ಸಾಮರ್ಥ್ಯವುಳ್ಳ ವಿದ್ಯುತ್ ಪರಿವರ್ತಕ ಅಳವಡಿಸಲು ಮನವಿ ಮಾಡಿದರು ಜೆಸ್ಕಾಂ ಅಧಿಕಾರಿಗಳು, ರೈತರಿಂದ ತಲಾ  ರು.2 ಸಾವಿರ ಜಮಾ ಮಾಡಿ ಕೊಟ್ಟರೆ ಮಾತ್ರ ಹೊಸ ವಿದ್ಯುತ್ ಟಿಸಿ ಅಳವಡಿಸುವುದಾಗಿ ಹೇಳುತ್ತಿದ್ದಾರೆ.
ಈಗಾಗಲೇ ತಾಲೂಕಿನಲ್ಲಿ ಬರದ ಛಾಯೆ ಮೂಡಿದೆ. ಇದ್ದ ನೀರು ಬತ್ತಿ ಹೋಗುತ್ತಿದೆ. ಗೊಬ್ಬರ, ಬೀಜ ಖರೀದಿ ಮಾಡಿ ರೈತರ ಕೈ ಖಾಲಿಯಾಗಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ರೈತರಿದ್ದಾರೆ. ಕೂಲಿ ನಾಲಿ ಮಾಡಿ ಮನೆ ನಡೆಸಬೇಕು ಎಂದರೆ, ಕೆಲಸ ಸಿಗುತ್ತಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತಗೊಂಡು ಪುಣೆ, ಮುಂಬೈಗೆ ಗೂಳೆ ಹೋಗುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಹಣ ಕೇಳುತ್ತಿರುವುದು ರೈತರನ್ನು ಮೂಲಗೆ ತಳ್ಳುವ ಹುನ್ನಾರವಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡ್ಯಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ತಕ್ಷಣವೇ ನೂತನ ಪರಿವರ್ತಕ ಅಳವಡಿಸಿ, ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಜೆಸ್ಕಾಂಕಚೇರಿಯ ಮುಂದೆ ರೈತರೊಂದಿಗೆ ಧರಣಿ ನಡೆಸುವುದಾಗಿ ಭೀಮಾಶಂಕರ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement