ನಿಲುಗಡೆಗೆ ಹೆಚ್ಚಿದ ಒತ್ತಡ
ಆಳಂದ: ತಾಲೂಕಿನ ಗಡಿಭಾಗ ಬೆಣ್ಣಿ ಶಿರೂರ ಸಮೀಪದ ಕುಲಾಲಿ ರೈಲು ನಿಲ್ದಾಣದಿಂದ ಪ್ಯಾಸೆಂಜರ್, ಸೂಪರ್‌ಫಾಸ್ಟ್ ಪ್ಯಾಸೆಂಜರ್ ಗಾಡಿ ನಿಲುಗಡೆಗೆ ಗಡಿಭಾಗದ ಜನರ ಒತ್ತಾಯ ಮುಂದುವರೆದಿದೆ.
ತಾಲೂಕಿನ ಬೆಣ್ಣಿಶಿರೂರ, ಮಾಡಿಯಾಳ, ಯಳಸಂಗಿ, ಹಡಲಗಿ, ದೇವಂತಗಿ, ಜವಳಿ (ಡಿ), ಭೂಸನೂರ, ಕವಲಗಾ, ಜಿಡಗಾ ಮತ್ತು ಅಫಜಲ್ಪುರ ತಾಲೂಕಿನ ರೇವೂರ (ಬಿ), ರೇವೂರ (ಎ), ಬಡದಾಳ, ಚಿಂಚೋಳಿ, ಮಲ್ಲಾಬಾದ್, ಅಂಕಲಗಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಸ್ಥರು ಬಹುದಿನಗಳಿಂದ ಕುಲಾಲಿ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸಪ್ರೆಸ್, ಚೆನ್ನೈ ಮುಂಬಯಿ ಮೇಲ್, ಸೋಲಾಪುರ, ಯಶವಂತಪುರ ರೈಲು ಗಾಡಿಗಳು ನಿಲುಗಡೆಯಾಗಬೇಕು ಎಂಬ ಕೂಗು ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಮಂತ್ರಿಯಾದ ಮೇಲೆ ಮತ್ತಷ್ಟು ಜೋರಾಗಿ ಕೇಳಿ ಬರುತ್ತಿದೆ.
ಖರ್ಗೆ ಕ್ಷೇತ್ರದಲ್ಲೇ ಕುಲಾಲಿ ಸ್ಟೇಷನ್: ಕೇಂದ್ರ ರೇಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುಲಾಲಿ ರೇಲ್ವೆ ನಿಲ್ದಾಣ ಬರುತ್ತದೆ. ಹೀಗಾಗಿ ಜನರ ಬೇಡಿಕೆಗಳು ಮರುಜೀವ ಬಂದಂತಾಗಿದೆ.
ಹಳೆಯದಾದ ನಿಲ್ದಾಣಕ್ಕೆ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ಕೊರತೆ, ಕುಡಿಯುವ ನೀರು, ರಾತ್ರಿ ತಂಗಲು ಕೋಣೆಗಳ ಅಭಾವವಿದೆ. ಕುಲಾಲಿ ರೇಲು ನಿಲ್ದಾಣಕ್ಕೆ ಖರ್ಗೆ ಅವರು ಭೇಟಿ ನೀಡಿ ಹೊಸ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡುವುದು, ನಿಲ್ದಾಣ ಹಳೆಯದಾದರಿಂದ ಮಳೆಗಾಲದಲ್ಲಿ ಸೋರುತ್ತಿದೆ. ಮಳೆಯಿಂದ ರಕ್ಷಿಸಲು ಮೇಲುಗಡೆ ತಾಡ ಪತ್ರಿ ಹೊದಿಕೆ ಹಾಕಲಾಗುತ್ತಿದೆ. ಹೀಗಾಗಿ, ಕುಲಾಲಿ ರೇಲ್ವೆ ನಿಲ್ದಾಣ ಹೊಸ ಕಟ್ಟಡದ ನಿರ್ಮಾಣಕ್ಕೆ ಮತ್ತು ಸೂಪರ್ ಫಾಸ್ಟ್ ಪ್ಯಾಸೆಂಜರ್ ನಿಲುಗಡೆಯಾಗುವ ಭಾಗ್ಯ ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸುಗರ, ಸಿಪಿಐನ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಶಾಳ ಒತ್ತಾಯಿಸಿದ್ದಾರೆ.