ಶಿಕ್ಷಣದ ವ್ಯವಸ್ಥೆ ಸುಧಾರಿಸಿ: ಮನವಿ
ಶಹಾಪುರ: ತಾಲೂಕಿನ ಹಲವಾರು ಶಾಲೆಗಳಿಗೆ ಶಿಕ್ಷಕರ ಕೊರತೆಯಿಂದ ಶಾಲೆಗಳಿಗೆ ಬೀಗ ಹಾಕಲಾಗಿದ್ದು, ಉರ್ದು ಶಾಲೆಗೆ ಶಿಕ್ಷಕರೆ ಇಲ್ಲ. ಗೈರು ಹಾಜರಾದ ಶಿಕ್ಷರ ಮೇಲೆ ಕ್ರಮ ತೆಗೆದುಕೊಂಡು ಶಿಕ್ಷಣದ ವ್ಯವಸ್ಥೆ ಸರಿಪಡಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕ ಸಮಿತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಡಿಡಿಪಿಐಗೆ ಮನವಿ ಮಾಡಿದ್ದಾರೆ.ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ದಾವಲಸಾಬ ನದಾಫ್ ಮಾತನಾಡಿ, ತಾಲೂಕಿನ ವಿವಿಧ ಶಾಲೆಗಳಿಗೆ 450ಕ್ಕೂ ಹೆಚ್ಚು ಶಿಕ್ಷರ ಕೊರತೆಯಿಂದಾಗಿ ಶಾಲೆಗಳಿಗೆ ಬೀಗ ಹಾಕಲಾಗಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರೂ ಕ್ಯಾತನಾಳ ಉರ್ದು ಶಾಲೆಗೆ ಶಿಕ್ಷಕರನ್ನು ನೇಮಿಸದೆ ಶಾಲೆಗೆ ಬೀಗ ಬಿದ್ದಿದೆ. ಮಕ್ಕಳು ಹಾಗೂ ಪಾಲಕರಿಗೆ ದಿಕ್ಕು ತೋಚದಂತಾಗಿದೆ. ಅಲ್ಲದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋನಾಲ ಮುಖ್ಯಗುರುಗಳು ಗೈರುಹಾಜರಾಗಿ ಸಹಿ ಹಾಕುತ್ತಿರುವುದನ್ನು ಪ್ರಶ್ನಿಸಿ ದೂರು ಸಲ್ಲಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಶಿಕ್ಷಣ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಆರೋಪಿಸಿದರು.ಸಂಘಟನೆಯ ತಾಲೂಕು ಅಧ್ಯಕ್ಷ ಹಣಮಂತ ಗೋನಾಲ, ಖಾಜಾಸಾಬ ನದಾಫ್, ಎಂ.ಬಿ. ನಾಟೇಕಾರ, ಪಂಪಣ್ಣ ಹೊಸ್ಮನಿ, ಜೈಲಾಲ್ ತೋಟದಮನಿ, ಸಿದ್ದಯ್ಯ ಹಿರೇಮಠ, ಎಸ್.ಎಂ. ಸಾಗರ, ಮಡಿವಾಳಪ್ಪಗೌಡ, ಮೈಬು ತಾರಕಾಸ್, ಖಾಸಿಂ ಪಟೇಲ್, ನಿಂಗಣ್ಣ ನಾಟೇಕಾರ ಇತರರು ಇದ್ದರು.
ಅಕ್ರಮ ಕಾಮಗಾರಿ; ನಾಗರಿಕರ ಆರೋಪ
ಯಾದಗಿರಿ: ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ನಗರಾಭಿವೃದ್ಧಿ ಅನುದಾನದಡಿ ನಗರಸಬೆಯಿಂದ ಕೈಗೆತ್ತಿಕೊಂಡ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಮುಖಂಡ ಚಂದ್ರಶೇಖರ ದಾಸನಕೇರಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಯೋಜನೆಯಡಿ ನಗರದ ಅಂಬೇಡ್ಕರ್ ವೃತ್ತದಿಂದ ಮೈಲಾಪುರ ಅಗಸಿವರೆಗೆ ಸುಮಾರು ರು. 75 ಲಕ್ಷ ಮೊತ್ತದಲ್ಲಿ ನಗರಸಭೆ ವತಿಯಿಂದ ಕಾಮಗಾರಿ ನಿರ್ವಹಿಸಲಾಗಿತ್ತು. ಈಗಾಗಲೇ ರು. 55 ಲಕ್ಷ ವ್ಯಯಿಸಿದ್ದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಈ ಕಾಮಗಾರಿಯಡಿ ರಸ್ತೆ ಅಗಲೀಕರಣ, ಡಾಂಬರೀಕರಣ ಮಾಡಬೇಕಾಗಿತ್ತು. ಆದರೆ ಕಾಟಾಚಾರಕ್ಕೆ ರಸ್ತೆಗೆ ಮಣ್ಣು ಸುರಿದು ರಿಪೇರಿ ನಾಟಕವಾಡಿ, ಕಾಮಗಾರಿ ಪೂರ್ಣಗೊಳಿಸಿದ್ದಾಗಿ ಕಡತಗಳನ್ನು ಸಿದ್ಧಪಡಿಸಿ ಹಣ ಎತ್ತಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಿ ಒಂದು ವರ್ಷವಾದರೂ, ಅವರು ಈ ನಿಟ್ಟಿನಲ್ಲಿ ಗಮನ ನೀಡುತ್ತಿಲ್ಲ. ಇಂತಹ ಹಲವಾರು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ದೂರು ಸಲ್ಲಿಸಲಾಗಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ ಎಂಬುದು ಆರೋಪ.
ಇಂದು ಪತ್ರಿಕಾ ದಿನಾಚರಣೆ
ಯಾದಗಿರಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಜು.11ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಕಾರ್ಯಕ್ರಮ ಉದ್ಘಾಟಿಸುವರು.
ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಎ.ಬಿ. ಮಾಲಕರಡ್ಡಿ, ರಾಜಾ ವೆಂಕಟಪ್ಪ ನಾಯಕ, ಗುರುಪಾಟೀಲ್ ಶಿರವಾಳ, ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಜಿಪಂ ಅಧ್ಯಕ್ಷೆ ಮರೆಮ್ಮ ಶಾಣ್ಯಾನೋರ, ಜಿಪಂ ಸಿಇಒ ಎಸ್.ಎ. ಜಿಲಾನಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಬಿ.ಎಂ. ಅವರು ತಿಳಿಸಿದ್ದಾರೆ.