ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇಡಂ ರೈತರ ಪ್ರಕರಣಕ್ಕೆ ಮುಕ್ತಿ ಯಾವಾಗ?

Vishwanath S
Updated On : 14 Jul 2013, 12:35 pm

ಕನ್ನಡಪ್ರಭ ವಾರ್ತೆ  ಸೇಡಂ  ಜು.13
ಹಿಂದಿನ ಬಿಜೆಪಿ ಸರ್ಕಾರ ಸೇಡಂ ರೈತರ ಮೇಲಿನ ಮೊಕದ್ದಮೆ ಹಿಂಪಡೆದಿರಲಿಲ್ಲ, ಆಗ ಅಸಹಾಯಕತೆ ವ್ಯಕ್ತಪಡಿಸಿದ್ದ ಸ್ಥಳೀಯ ಶಾಸಕರು ಈಗ ಮಂತ್ರಿಯಾಗಿದ್ದಾರೆ. ಈಗಲಾದರೂ ಸಚಿವರು ಮುತುವರ್ಜಿ ವಹಿಸಿ ಸೇಡಂ ರೈತರು ಕೋರ್ಟಿಗೆ ಅಲೆಯುವುದನ್ನು ತಪ್ಪಿಸುವರೇ  ಎಂಬ ಕಾತರದಲ್ಲಿದ್ದಾರೆ  ರೈತರು.
ಕಳೆದ ವರ್ಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರ ಮೇಲೆ ಹೂಡಿದ್ದ ಪ್ರಕರಣಗಳನ್ನು ಹಿಂಪಡೆದ ಬಿಜೆಪಿ ಸರ್ಕಾರ, ಸೇಡಂ ರೈತರಿಗೆ ಮಾತ್ರ  ಯಾಕೋ ಕರುಣೆ ತೋರಲಿಲ್ಲ. ಸೇಡಂ ತಾಲೂಕಿನ ಕೊಂಕನಳ್ಳಿ, ನೀಲಹಳ್ಳಿ, ಹೊಸಳ್ಳಿ ವ್ಯಾಪ್ತಿಯಲ್ಲಿ ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿ 2008ರಲ್ಲಿ ಕೊಂಕನಳ್ಳಿಯಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಸಾರ್ವಜನಿಕ ಸಭೆ ವೇಳೆ ರೈತರ ಜಮೀನು ಸ್ವಾಧೀನಪಡಿಸಿಕೊಂಡ ನಂತರ ಕಂಪನಿ ನೀಡಬೇಕಾದ ಸವಲತ್ತುಗಳ ಬಗ್ಗೆ ಹಾಗೂ ಈಗಾಗಲೇ ಸೇಡಂ ತಾಲೂಕಿನಲ್ಲಿರುವ ಹಲವು ರೈತರಿಗೆ ಮಾಡಿರುವ ಮೋಸ, ನಂಬಿಕೆ ದ್ರೋಹದಿಂದಾಗಿ ಇಲ್ಲಿನ ರೈತ ಮೊದಲು ಅರಸನಾದವನು ಭೂಮಿ ಕೊಟ್ಟ ನಂತರ ಅದೇ ಕಂಪನಿಗಳಲ್ಲಿ ಕಾಯಂ ನೌಕರಿಯೂ ಇಲ್ಲದೆ ಕೂಲಿಯಾಳಾಗಿ ದುಡಿದ ಆಕ್ರೋಶವನ್ನು ಹಲವು ರೈತರು, ರೈತ ನಾಯಕರು ವ್ಯಕ್ತಪಡಿಸಿದಾಗ ರೈತರ ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಲಾಠಿಚಾರ್ಚ್‌ಗೆ ಆದೇಶ: ಆಗ ಇದ್ದಕ್ಕಿದ್ದಂತೆ ಕುಪಿತಗೊಂಡ ಅಂದಿನ ಜಿಲ್ಲಾಧಿಕಾರಿ ಪಂಕಜಕುಮಾರ್ ಪಾಂಡೆ ರೈತರನ್ನು ಸಮಾಧಾನಪಡಿಸುವುದನ್ನು ಬಿಟ್ಟು ಗಲಾಟೆ ಮಾಡಲೇ ಬಂದಿದ್ದಾರೆಂದು ಪೂರ್ವಾಗ್ರಹ ಪೀಡಿತರಾದಂತೆ ಸಕಾರಣವಿಲ್ಲದೇ ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ ಮಾಡಲು ಜಿಲ್ಲಾಧಿಕಾರಿಗಳೇ ಪೊಲೀಸರಿಗೆ ಆದೇಶಿಸಿದ್ದರು.
ಆ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟಿಗೆ ಹಲವು ರೈತರು ತೀವ್ರ ಗಾಯಗೊಂಡಿದ್ದರು. ಆ ಘಟನೆಗೆ ಆಗ ಬುದ್ಧಿಜೀವಿಗಳ, ಸಾರ್ವಜನಿಕ ವಲಯದಲ್ಲಿ ಹಾಗೂ ರೈತರಲ್ಲಿ ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದವರೆಗೆ ದೂರು ದುಮ್ಮಾನಗಳು ಹೋಗಿದ್ದವು.  ಅಂದಿನ ಘಟನೆಗೆ ರೈತರೇ ಕಾರಣ ಎಂದು ಕೊಂಕನಳ್ಳಿ ಗ್ರಾಮದ ಮುಖಂಡ ಜಗದೇವಪ್ಪ ಇತರರು ಸೇರಿ 42 ಜನ ಬಡ ರೈತರ ಮೇಲೆ ಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕೇಸಿನಲ್ಲಿ 42 ರೈತರು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.
  ಮಳಖೇಡದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವಿರೂಪಾಕ್ಷಪ್ಪ ತಡಕಲ್ ನೇತೃತ್ವದಲ್ಲಿ ಧರಣಿ ಮಾಡಿದ ಹಂಗನಳ್ಳಿ ರೈತರ ವಿರುದ್ಧ ಮತ್ತೊಂದು ಕ್ರಿಮಿನಲ್ ಪ್ರಕರಣವನ್ನು  20 ಜನ ಬಡ ರೈತರ ಮೇಲೆ ಮಳಖೇಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕೇಸಿನಲ್ಲಿಯೂ ರೈತರು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.
ಕಾಳಜಿ ತೋರದ ಜನಪ್ರತಿನಿಧಿಗಳು: ಸೇಡಂ ರೈತರ ಮೇಲಿನ ಪ್ರಕರಣಗಳನ್ನು ಹಿಂಡೆಯುವುದಕ್ಕಾಗಿ ವರದಿಗಳು ಸರ್ಕಾರಕ್ಕೆ ತಲುಪಿದ ನಂತರ ಮುಂದಿನ ಹಂತದಲ್ಲಿ ಮುತುವರ್ಜಿವಹಿಸದೆ ಸದನದಲ್ಲಿ ಪ್ರಶ್ನಿಸದೆ ನಿರ್ಲಕ್ಷ್ಯಿಸಿದ್ದ  ಇಲ್ಲಿನ ಸ್ಥಳೀಯ ಶಾಸಕ ಡಾ. ಶರಣ ಪ್ರಕಾಶ ಪಾಟೀಲರು ಈಗ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ. ಈಗಲಾದರೂ ರೈತರ ಸಂಕಷ್ಟವನ್ನು ಪರಿಹರಿಸುವರು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಇದೇ ತಿಂಗಳ 12ನೇ ತಾರೀಕಿನಿಂದ ಸದನ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿಯನ್ನು ಪಡೆದ ರೈತರು ಈ ವಿಷಯದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಸಚಿವರು ರೈತರ ಮೇಲಿನ ಪ್ರಕರಣಗಳಿಗೆ ಇತಿಶ್ರೀ ಹಾಡುವ ಪ್ರಯತ್ನ ಮಾಡಲು  ಒತ್ತಾಯಿಸಿದ್ದಾರೆ.
ಜು. 25ಕ್ಕೆ ವಿಚಾರಣೆ: ಸೇಡಂ ರೈತರ ಮೇಲಿನ  ಎರಡೂ ಪ್ರಕರಣಗಳನ್ನು ಜುಲೈ 1 ರಂದು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದು, ಈ ಪ್ರಕರಣಗಳಲ್ಲಿ ಹಲವಾರು ರೈತರು ಬೇರೆ ಬೇರೆ ಊರುಗಳವರು, ರೈತರಿಗೆ ಒಬ್ಬರಿಗೊಬ್ಬರ ಪರಿಚಯವಿರದ ಕಾರಣ ಮತ್ತು ಸಂವಹನ ಕೊರತೆಯಿಂದಾಗಿ ಹಾಜರಾಗಿಲ್ಲ.  ಈ ಪ್ರಕರಣಗಳನ್ನು ನ್ಯಾಯಾಲಯವು ಇದೇ ತಿಂಗಳ 25ನೇ ತಾರೀಕಿಗೆ ನಿಗದಿಪಡಿಸಿದೆ.
ತಾರತಮ್ಯಕ್ಕೆ ಆಕ್ರೋಶ: ಸೇಡಂ ರೈತರ ಮೇಲಿನ ಪ್ರಕರಣ ಹಿಂಪಡೆಯದ ಬಿಜೆಪಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಿ ತಾರತಮ್ಯ ನೀತಿ ಅನುಸರಿಸಿದ್ದು, ರಾಜ್ಯದ ಇತರೆಡೆಯ  ಪ್ರಕರಣ ಹಿಂಡೆದು ಹೈ.ಕ. ಭಾಗದ  ಸೇಡಂ ರೈತರ ಪ್ರಕರಣ ಹಿಪಡೆದಿಲ್ಲ. ಹಾಗಾದರೆ ಸೇಡಂ ರೈತರು ರೈತರಲ್ಲವೇ ಎನ್ನುವ ಸಹಜ ಆಕ್ರೋಶ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement