ಹದಗೆಟ್ಟ ನಗರ ಪಾಲಿಕೆ ಆಡಳಿತ
ಗುಲ್ಬರ್ಗ: ನೋಟ- 1: ಸಾರ್ವಜನಿಕ ರಸ್ತೆಯನ್ನೇ ಅತಿಕ್ರಮಿಸಿ ಶೌಚಾಲಯ ನಿರ್ಮಿಸಿದ್ದು, ಗಲೀಜು ತೆಗೆದು ಚರಂಡಿಗೆ ಬಿಡಲಾಗಿದೆ. ಇದರಿಂದ ಇಡೀ ಬಡಾವಣೆಯಲ್ಲಿ ನರಕ ಯಾತನೆ ಎಂದು ಕುಂಬಾರಗಲ್ಲಿಯ ಮಲ್ಲಿಕಾರ್ಜುನ ಯಳಮೇಲಿ ದೂರು ವಿಚಾರಣೆಗೆ ಬಂದಾಗ ಪಾಲಿಕೆ ಆಯುಕ್ತ ಕಟ್ಟಿಮನಿ, ಇಂಜಿನಿಯರ್ ಜಾಧವ ಇಬ್ಬರೂ ಅತಿಕ್ರಮಣ ತೆರವು ಮಾಡಲಾಗಿದೆ ಎಂದಾಗ ಲೋಕಾಯುಕ್ತ ಭಾಸ್ಕರರಾವ್ ದೂರುದಾರರತ್ತ ನೋಡಿದಾಗ ಬೇಕಾಬಿಟ್ಟಿ ತೆರವು ಕಾರ್ಯವಾಗಿದೆ. ಅದೂ ನಿಮ್ಮ ನೋಟಿಸ್ ಬಂದ ಮೇಲೆ... ಎಂದರು
ನೋಟ- 2: ತಮ್ಮ 6 ಎಕರೆ ಜಮೀನಿನಲ್ಲಿ ಜಿಪಂ ಇಂಜಿನಿಯಿರಿಂಗ್ ಅಧಿಕಾರಿಗಳು ರಸ್ತೆ ನಿರ್ಮಿಸಿದ್ದರೂ ಪರಿಹಾರ ನೀಡಿಲ್ಲ ಎಂದು ಚೋಳಿಯ ಕಾಶಮ್ಮ ನೀಡಿದ್ದ ದೂರಿಗೂ ಲೋಕಾಯುಕ್ತ ರೇಗಿದರು. ಆಸ್ತಿಪಾಸ್ತಿ ಸಂರಕ್ಷಣೆ ಸಾಂವಿಧಾನಿಕ ಕರ್ತವ್ಯ. ಇದನ್ನೇ ಮರೆತರೆ ಹೇಗ್ರಿಯ ಎಂದು ಜಿಲ್ಲಾಧಿಕಾರಿಯನ್ನೇ ಪ್ರಶ್ನಿಸಿದರು. ಅಧಿಕಾರಿಗಳು ಬೇಕಾಬಿಟ್ಟಿತನ ಪ್ರದರ್ಶಿಸಿದರೆ ಹೇಗೆ ಕಾಶಮ್ಮ ಜಮೀನು ಸ್ವಾಧೀನ ಪ್ರಕ್ರಿಯೆ ಶುರುಮಾಡಿ, 2 ತಿಂಗಳಲ್ಲಿ ಆಕೆಗೆ ಪರಿಹಾರ ದೊರಕುವಂತಾಗಬೇಕು ಎಂದರು.
ನೋಟ-3: ಚೌಡೇಶ್ವರಿ ಕಾಲೇನಿಯಲ್ಲಿನ ದೇವಾಲಯ ರಸ್ತೆಯನ್ನೇ ನುಂಗಿದೆ ಎಂಬ ದೂರಿಗೂ ಪಾಲಿಕೆಯಿಂದ ಸರಿಯಾದ ಕ್ರಮ ಕೈಗೊಳ್ಳಲಾಗಿರಲಿಲ್ಲ. ಪಾಲಿಕೆಯ ಸಮಜಾಯಿಷಿ ಸುಳ್ಳೆಂದು ದೂರುದಾರ ಪ್ರಕಾಶ ಬೆನಕನಹಳ್ಳಿ, ಸುಭಾಸ ಬೆನಕನಹಳ್ಳಿ ಲೋಕಾಯುಕ್ತರಿಗೆ ಹೇಳಿದ್ದೇ ತಡ ಕೋಪಗೊಂಡ ಭಾಸ್ಕರರಾವ್ ವಿವರಗಳೊಂದಿಗೆ ಬನ್ನಿ ಎಂದು ಪಾಲಿಕೆಯವರಿಗೆ ಎಚ್ಚರಿಕೆ ನೀಡಿದ್ದು.
ನೋಟ-4: ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರವಾಗಿದೆ ಎಂದು ಅಫಜಲ್ಪೂರ ತಾಲೂಕಿನ ಹಸರಗುಂಡಗಿಯ ಅಶೋಕ ಪಟ್ಟೇದಾರ್ ದೂರನ್ನು ವಿಚಾರಿಸಿದ ಲೋಕಾಯುಕ್ತರು ಜಿಪಂ ಉಪ ಕಾಯದರ್ಶಿ ವಸಂತ ಕುಲ್ಕರ್ಣಿಯವರಿಗೆ 3 ತಿಂಗಳಲ್ಲಿ ವರದಿಗೆ ಸೂಚನೆ.
ನೋಟ-5: ಅರಣ್ಯ ಅಭಿವೃದ್ಧಿಗೆ ವೆಚ್ಚವಾದ ಅನುದಾನ ಗಾಯಬ್, ಅರಣ್ಯ ಭೂಮಿ ವಿಸ್ತರಣೆಯೇ ಆಗಿಲ್ಲ ಎಂಬ ಡಾ.ರಾಜು ಕುಳಗೇರಿ ದೂರಿಗೆ ಸ್ಪಂದಿಸಿದ ಲೋಕಾಯುಕ್ತರು ನಾಗರಿಕರು, ಅಧಿಕಾರಿಗಳು, ಲೋಕಾಯುಕ್ತ ಸಿಬ್ಬಂದಿ ಯನ್ನೊಳಗೊಂಡ ಸಮೀತಿ ರಚಿಸಿ 2 ತಿಂಗಳಲ್ಲಿ ವಿವರವಾದ ತನಿಖೆಗೆ ಆದೇಶ.
ಸ್ಥಳೀಯ ಆಡಳಿತದ ಬೇಕಾಬಿಟ್ಟಿತನ: ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಗುಲ್ಬರ್ಗದಲ್ಲಿ 2 ದಿನ ತಂಗುವ ಮೂಲಕ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ ಚರ್ಚೆಗೆ ಬಂದ ನೂರಾರು ಪ್ರಕರಣಗಳಲ್ಲಿ ಇವು ಕೆಲವು ಸ್ಯಾಂಪಲ್ ಅಷ್ಟೆ.
ಸ್ವೀಕರಿಸಿದ 67 ಹೊಸ ದೂರುಗಳು, ವಿಚಾರಣೆ ನಡೆಸಿದ 102 ಹಳೆಯ ದೂರುಗಳಲ್ಲಿ ಸಿಂಹಪಾಲು ಸ್ಥಳೀಯವಾಗಿ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮಟ್ಟದಲ್ಲೇ ಬಗೆಹರಿಯಬೇಕಿದ್ದಂತಹ ದೂರುಗಳೇ ಆಗಿದ್ದವು ಎಂಬುದು ಗಮನಾರ್ಹ. ಆದರೆ, ಇಂದು ಅಂತಹ ದೂರುಗಳೂ ಸಹ ವರ್ಷಾನುಗಟ್ಟಲೆ ವಿಚಾರಣೆಯಾಗದೆ ನೆನೆಗುದಿಗೆ ಬಿದ್ದು ಅವುಗಳನ್ನೆಲ್ಲ ಲೋಕಾ ನ್ಯಾಯಮೂರ್ತಿ ಭಾಸ್ಕರರಾವ್ ಅವರೇ ಇತ್ಯರ್ಥ ಮಾಡಲು ಬರಬೇಕಾದ ಪ್ರಸಂಗ ಒದಗಿದ್ದು ನೋಡಿದರೆ ಹದಗೆಟ್ಟ ನಗರ ಪಾಲಿಕೆ, ಜಿಲ್ಲಾಡಳಿತಕ್ಕೆ ಕನ್ನಡಿ ಹಿಡಿದಂತಿತ್ತು.
ಪಿಂಚಣಿ ಬಂದಿಲ್ಲ, ಪಡಿತರ ಸಿಕ್ಕಿಲ್ಲ, ರೇಷನ್ ಕಾರ್ಡ್ ಕೊಟ್ಟಿಲ್ಲ ಎಂಬ ಸಮಸ್ಯೆಗಳನ್ನೆಲ್ಲ ಆಯಾ ತಾಲೂಕು ವ್ಯಾಪ್ತಿಯ ತಹಸೀಲ್ದಾರ್ ಅಇವರೇ ಮುತುವರ್ಜಿಯಿಂದ ಬಗೆಹರಿಸಬೇಕಿದ್ದ ಸಮಸ್ಯೆಗಳಾದರೂ ಇವುಗಳಿಗೂ ಲೋಕಾಯುಕ್ತರೇ ಸೂಚನೆ ನೀಡುವಂತಾಗಿದ್ದು ದುರಂತವಲ್ಲದೆ ಮತ್ತೇನು
ಬ್ರಹ್ಮಪೂರ ಬಡಾವಣೆಯಲ್ಲಿರುವ ಕುಂಬಾರಗಲ್ಲಿಯಲ್ಲಿ ರಸ್ತೆ ಅತಿಕ್ರಮಣ, ಶೌಚಾಲಯ ನಿರ್ಮಾಣದ ದೂರನ್ನಂತೂ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಒಬ್ಬ ಸ್ಯಾನಿಟರಿ ಇನ್ಸಪೆಕ್ಟರ್ನನ್ನು ಕಳುಹಿಸಿ ನಿರ್ವಹಿಸಬೇಕಾದಂತಹ ಸಂಗತಿ. ಅದೂ ಸಹ ಲೋಕಾ ಗಮನ ಸೆಳೆದದ್ದು, ಚರಂಡಿ ಸ್ವಚ್ಛ ಮಾಡಿ ಮಾರಾಯ್ರೆ... ಎಂದು ಪಾಲಿಕೆಗೆ ಲೋಕಾಯುಕ್ತರೆ ಸೂಚಿಸಿದ್ದು, ನೋಡಿದರೆ ನಗರಾಡಳಿತ ಹಾಗೂ ಜಿಲ್ಲಾಡಳಿತ ಎರಡೂ ಹಳಿ ತಪ್ಪುತ್ತಿವೆ ಎಂಬ ಅನುಭವ ಒಟ್ಟಿನಲ್ಲಿ ಅಲ್ಲಿದ್ದ ಎಲ್ಲರ ಅನುಭವಕ್ಕೂ ಬಂತು.
ಜನಸ್ನೇಹಿ ಆಡಳಿತ ಯಾವಾಗ: ಶಕುಂತಲಾ ಎಂಬುವವರಿಗೆ 2011ರಿಂದಲೂ ಮಾಸಾಶನ ಬಂದ್ ಆಗಿರುವ ಸಂಗತಿ ಲೋಕಾಯುಕ್ತರ ಗಮನ ಸೆಳೆದಾಗ ಇದಕ್ಕೆ ಸೂಕ್ತ ಉತ್ತರ ಜಿಲ್ಲಾಡಳಿತ ಬಳಿಯೇ ಇರಲಿಲ್ಲ ಎಂಬುದು ದಿಗ್ಭ್ರಮೆ ಹುಟ್ಟಿಸುವ ವಿಚಾರ. ಮಾನವೀಯತೆ ಹಾಗೂ ಅಂತ:ಕರಣ ಎಲ್ಲಿಟ್ಟು ಬಂದಿರುವಿರಿ ಎಂದು ಲೋಕಾಯುಕ್ತರೇ ಖಾರವಾಗಿ ಪ್ರಶ್ನಿಸಿದ್ದು, ಕಂಡರೆ ಶಕುಂತಲಾರಂತಹ ಅನೇಕರಿಗೆ ಆಗಿರುವ ಅನ್ಯಾಯ ಕಣ್ಣಿಗೆ ಕಟ್ಟದಿರದು.
ಜಿಪಂ ಅಡಿಯಲ್ಲಿ 32 ಸರ್ಕಾರಿ ಇಲಾಖೆಗಳು ಬರುತ್ತವೆ. ಇನ್ನು ಜಿಲ್ಲಾ ಪೊಲೀಸ್ ಪ್ರತ್ಯೇಕ ಜಾಲ ಹೊಂದಿದೆ. ಇದೆಲ್ಲದರ ಸಮನ್ವಯ ಸಾಧನೆಯೇ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಡಳಿತದ ಪ್ರಮುಖ ಕೆಲಸ. ಪಾಲಿಕೆ 6 ಲಕ್ಷ ಜನವಸತಿಯ ಗುಲ್ಬರ್ಗ ಮಹಾನಗರದ ಮೂಲ ಸೌಕರ್ಯ ಬಗ್ಗೆ ಕ್ರಮ ಜರುಗಿಸಬೇಕು. ಇವೆಲ್ಲವುಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಅನುಸರಿಸುತ್ತ ಸಾಗಿರುವ ಬೇಕಾಬಿಟ್ಟಿತನವೇ ಲೋಕಾಯುಕ್ತ ಅಹವಾಲಿನ ಸಂದರ್ಭದಲ್ಲಿ ಆಡಳಿತದ ಹುಳುಕು- ಕೊಳಕಿನ ವಿಶ್ವರೂಪ ದರ್ಶನವಾಗಿದ್ದು ಎಂದರೆ ತಪ್ಪಾಗಲಾರದು.
-ಶೇಷಮೂರ್ತಿ ಅವಧಾನಿ