ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೋರಾಟದ ನಡುವೆಯೇ ವಿದ್ಯುತ್ ತಂತಿ ಅಳವಡಿಕೆ

Vishwanath S
Updated On : 14 Jul 2013, 12:34 pm

ಕನ್ನಡಪ್ರಭ ವಾರ್ತೆ  ಸೇಡಂ  ಜು.13
ಸೇಡಂ ಪಟ್ಟಣದ ಹೃದಯ ಭಾಗದಿಂದ ವಾಸವದತ್ತಾ ಸಿಮೆಂಟ್ ಕಂಪನಿಗೆ ಹಾದುಹೋಗಿರುವ ರೇಲ್ವೆ ಹಳಿಗಳ ಮೇಲೆ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಅಳವಡಿಸಬಾರದು ಎನ್ನುವ ಸೇಡಂ ನಾಗರಿಕರ ಅಹವಾಲು ಹಾಗೂ ಕೂಗು ಬಹುದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ನಮ್ಮವರೇ ಆದ ಡಾ. ಮಲ್ಲಿಕಾರ್ಜುನ ಖರ್ಗೆಯವರು ರೇಲ್ವೆ ಮಂತ್ರಿಯಾದ ನಂತರ ನೆನೆಗುದಿಗೆ ಬಿದ್ದ ಹೋರಾಟಕ್ಕೆ ಬಲ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಹೋರಾಟಕ್ಕೆ ಬಲ ಸಿಗುವ ಬದಲಾಗಿ ಸೇಡಂ ಜನತೆಗೆ ಮರ್ಮಾಘಾತವಾಗಿದೆ, ಇದನ್ನು ನಿರೀಕ್ಷಿಸಿರಲಿಲ್ಲ ಎನ್ನುವುದು ಇಲ್ಲಿನ ನಾಗರಿಕರ ಆಕ್ರೋಶದ ನುಡಿ.
ಹೋರಾಟ ಹತ್ತಿಕ್ಕುವ ಪ್ರಯತ್ನ: ಹಲವು ಬಾರಿ ರೇಲ್ವೆ ಹಳಿಯನ್ನು ಸ್ಥಳಾಂತರಿಸಿ ಸೇಡಂ ನಾಗರಿಕರಿಗೆ ಆಗುತ್ತಿರುವ ನಿರಂತರ ತೊಂದರೆಯನ್ನು ನೀಗಿಸುವಂತೆ ಹಲವಾರು ಪ್ರತಿಭಟನೆ ಹಾಗೂ ಹೋರಾಟಗಳನ್ನು ಮಾಡಲಾಗಿದೆ. ಆದರೆ ಪಟ್ಟಣದ ಮದ್ಯಭಾಗದಲ್ಲಿ ಹಾದು ಹೋಗುವ ಮೂಲಕ ವಾಸವದತ್ತಾ ಸಿಮೆಂಟ್ ಕಂಪನಿಗೆ ಸಂಪರ್ಕ ಒದಗಿಸುವ ಹಳಿಯ ಮೇಲೆ ವಿದ್ಯುಥೀಕರಣಗೊಳಿಸದಂತೆ ಸೇಡಂ ನ್ಯಾಯಾಲಯದ ಆದೇಶವಿದ್ದರೂ, ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಆರ್‌ಪಿಎಫ್ ತುಕಡಿಯೊಂದಿಗೆ ಬಂದು ಜನರನ್ನು ಹೋರಾಟಕ್ಕೆ ಅಣಿಯಾಗದಂತೆ ಭವನಾತ್ಮಕವಾಗಿ ಭಯಭೀತಗೊಳಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ.
ವಿರೋಧದ ನಡುವೆಯೂ ರೇಲ್ವೆ ಹಳಿಗಳಿಗೆ ವಿದ್ಯುತ್ ವೈರ್ ಅಳವಡಿಸಿದ ಕಂಪನಿಯ ಹಾಗೂ ರೇಲ್ವೆ ಇಲಾಖೆಯ ಧೋರಣೆ ಸೇಡಂ ನಾಗರಿಕರ ಹಿತಾಸಕ್ತಿಯ ವಿರುದ್ಧವಾಗಿದೆ.
ತೀವ್ರ ತೊಂದರೆ: 1984-85ರಲ್ಲಿ ಕಂಪನಿ ಒಂದು ಯುನಿಟ್ ಉತ್ಪಾದನಾ ಘಟಕ ಸ್ಥಾಪಿಸಿತ್ತು. ಆದರೆ ಈಗ 4 ಯುನಿಟ್‌ಗಳನ್ನು ಕಂಪನಿ ಹೊಂದಿದ್ದು ರೈಲು ಸಂಚಾರ ಹೆಚ್ಚಾಗಿದೆ. ಒಂದು ರೈಲು ರಸ್ತೆ ದಾಟಲು ಸುಮಾರು 20 ನಿಮಿಷಕ್ಕೂ ಮೇಲ್ಪಟ್ಟು ಕಾಯಬೇಕಾದ ಪರಿಸ್ಥಿತಿ ಇದ್ದು, ಇದರಿಂದ ಸಾರ್ವಜನಿಕರಿಗೆ ತಿರುಗಾಡಲು ತೀವ್ರ ತೊಂದರೆ ಎದುರಾಗಿದೆ.
  ಹಳಿಯ ಒಂದೆಡೆ ಬಸ್ ನಿಲ್ದಾಣ, ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಪರಿವೀಕ್ಷಣಾ ಮಂದಿರ ಇನ್ನಿತರ ಪ್ರಮುಖ ಕಚೇರಿಗಳು ಇದ್ದು ಹಾಗೆಯೇ ರಾಜ್ಯಾದ್ಯಂತ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಿವೆ, ಇನ್ನೊಂದೆಡೆ ಸರ್ಕಾರಿ ಹೆರಿಗೆ ಆಸ್ಪತ್ರೆ, ರೇಲು ನಿಲ್ದಾಣ ಹಾಗೂ ಶಾಲಾ- ಕಾಲೇಜುಗಳಿದ್ದು, ತುರ್ತು ಪರಿಸ್ಥಿತಿಯಲ್ಲಿ  ಉದಾಹರಣೆಗೆ ಊರಲ್ಲಿ ಏನಾದರೂ ಬೆಂಕಿ ಅನಾಹುತದಂತಹ ಅವಗಢಗಳು ಸಂಭವಿಸಿದರೆ ಆ ಕಡೆ ಇರುವ ಅಗ್ನಿ ಶಾಮಕ ವಾಹನಗಳು, ಆಂಬುಲೆನ್ಸ್ ಸಂಚಾರ ಸುಗಮವಾಗದೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತಿದೆ.
ಇದರಿಂದಾಗಿ ಗರ್ಭಿಣಿಯರು, ವೃದ್ಧರು, ರೋಗಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹೊರ ಊರುಗಳಿಗೆ ಹೋಗುವ ಪ್ರಯಾಣಿಕರು, ಪರೀಕ್ಷಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಈಡಾಗಿದೆ.
ಆದೇಶ ಮೀರಿ ವಿದ್ಯುತ್‌ವೈರ್: ಈ ವಿಷಯಕ್ಕೆ ಸಂಬಂಧಿಸಿದಂತೆ ಸೇಡಂ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯವಾದಿ ಆರ್.ಎಸ್.ಪಾಟೀಲ್ ಮತ್ತು ಇತರರು ಸಿವಿಲ್ ದಾವೆಹೂಡಿದ್ದು, ನ್ಯಾಯಾಲಯವು ರೈಲು ಹಳಿಗಳಿಗೆ ಕಂಬ ಹಾಗೂ ವಿದ್ಯುತ್ ತಂತಿ ಅಳವಡಿಸಬಾರದು ಎಂದು ನಿರ್ಬಂಧಕ ಆಜ್ಞೆ ವಿಧಿಸಿದೆ. ಆದರೆ ಅದನ್ನು ಮೀರಿ ರೇಲ್ವೆ ಹಳಿಗಳಿಗೆ ವಿದ್ಯುತ್ ವೈರ್ ಅಳವಡಿಸುತ್ತಿರುವುದು ನ್ಯಾಯ ಬಾಹಿರವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಸೇಡಂ ಸಿವಿಲ್ ನ್ಯಾಯಾಲಯದಲ್ಲಿ ಸಮಾಜ ಸೇವಕ ಗುಂಡಪ್ಪ ಸಲ್ಲಿಸಿದ ಮತ್ತೊಂದು ದಾವೆಯೂ ಬಾಕಿಯಿದೆ.
ಸೇಡಂ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ್ ಇದೀಗ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಜತೆಗೆ ಪ್ರಭಾವಿಗಳು ಕೂಡ, ಇವರಿಗೆ ಸೇಡಂ ಜನತೆ ನಿರಂತರವಾಗಿ ಮೂರು ಬಾರಿ ಗೆಲ್ಲಿಸುವ ಮೂಲಕ ಹ್ಯಾಟ್ರಿಕ್ ಗೆಲವಿನ ಇತಿಹಾಸ ಸೃಷ್ಟಿಸುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಆದರೆ ಸಚಿವರು ಈ ವಿಷಯಕ್ಕೆ ಸಂಬಂಧಿಸಿದಂತೆ ಚಕಾರವೆತ್ತುತ್ತಿಲ್ಲ ಎನ್ನವುದು ಸಾರ್ವಜನಿಕರ ಬೇಸರವಾಗಿದೆ, ಜನ ಸಚಿವರಿಂದ ಇಂತಹ ನಿರ್ಲಿಪ್ತತೆ ನಿರೀಕ್ಷಿಸಿರಲಿಲ್ಲ.
 ಮಲ್ಲಿಕಾರ್ಜುನ ಖರ್ಗೆಯವರ ಕಟ್ಟಾ ಬೆಂಬಲಿಗ, ಮಾನಸ ಪುತ್ರರೆಂದೇ ಪರಿಗಣಿಸಲ್ಪಡುವ ಡಾ. ಶರಣಪ್ರಕಾಶ ಪಾಟೀಲರು ಈಗಲಾದರೂ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಕಂಪನಿಯ ಹಾಗೂ ಇನ್ನಿತರ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಜವಾದ ಜನಹಿತವಾದ ನಿರ್ಧಾರ ತಾಳುವ ಮೂಲಕ ಮಧ್ಯ ಪ್ರವೇಶಿಸಿ ಜನರ ಗೋಳು ತಪ್ಪಿಸುವರೆಂದು ಜನ ವಿಶ್ವಾಸ ಹೊಂದಿದ್ದಾರೆ.
 ಇಲ್ಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಈ ವಿಷಯ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಖರ್ಗೆಯವರಿಗೆ ಮನವಿ: ಜನಪರರೂ ಅಭಿವೃದ್ಧಿಯ ವಿಷಯಕ್ಕೆ ರಾಜಿಗೆ ಒಳಗಾಗದ ನಮ್ಮ ಖರ್ಗೆಯವರು ದಯವಿಟ್ಟು ಸೇಡಂ ಜನರ ಭಾವನೆಗಳಿಗೆ ಸ್ಪಂಧಿಸಿ ಹಳಿಯು ಹಾದು ಹೋಗುವ ಸ್ಥಳಕ್ಕೆ ಭೇಟಿ ಕೊಟ್ಟು ಖುದ್ದಾಗಿ ಸಮಸ್ಯೆ ಬಗೆಹರಿಸಲು ಸೇಡಂ ಜನತೆ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement