21ಕ್ಕೆ ಉಪ್ಪಾರ ನೌಕರರ ಸಭೆ
ಯಾದಗಿರಿ: ಭಗೀರಥ ಉಪ್ಪಾರ ಸಮಾಜದ ಸರ್ಕಾರಿ ನೌಕರರ ಸಂಘದ ರಚನೆ ವಿಷಯವಾಗಿ ಜು.21ರಂದು ಬೆ.10ಕ್ಕೆ ನಗರದ ಎಪಿಎಂಸಿಯಲ್ಲಿ ಸಭೆ ಏರ್ಪಡಿಸಲಾಗಿದೆಂದು ಸಮಾಜದ ತಾಲೂಕಾ ಕಾರ್ಯದರ್ಶಿ ವಿಶ್ವನಾಥ ಗೂಡೂರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ನೌಕರರ ಸಂಘ ರಚನೆ ಬಹಳ ಅವಶ್ಯಕವಾಗಿದ್ದರಿಂದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸುವಂತೆ ಕೋರಿದ್ದಾರೆ.
ರಸ್ತೆ ಗುಂಡಿ ಮುಚ್ಚಲು ಆಗ್ರಹ
ಯಾದಗಿರಿ: ಯಾದಗಿರಿ ಶಹಾಪುರ ರಸ್ತೆಯಿಂದ ಗುಂಡಳ್ಳಿ ತಾಂಡಾಕ್ಕೆ ಹೋಗುವ ಮಾರ್ಗದಲ್ಲಿ ಇರುವ ತೆಗ್ಗು ಗುಂಡಿಯನ್ನು ಮುಚ್ಚುವಂತೆ ಗುಂಡಳ್ಳಿ ತಾಂಡಾದ ಚಂದ್ರೋದಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ ಆಗ್ರಹಿಸಿದೆ. ಈ ರಸ್ತೆಯ ಮದ್ಯದಲ್ಲಿ ಎಲ್ಲೆಂದರಲ್ಲಿ ತೆಗ್ಗು ಗುಂಡಿ ಬಿದ್ದಿರುವುದರಿಂದ ಈಗಾಗಲೆ ಅನೇಕರು ತಮ್ಮ ವಾಹನದೊಂದಿಗೆ ಅಪಘಾತಕ್ಕೀಡಾಗಿದ್ದಾರೆ. ಸುಮಾರು ಎಂಟು ತಿಂಗಳಿನಿಂದ ರಸ್ತೆಯ ಮಧ್ಯೆ ಗುಂಡಿ ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಜಿಲ್ಲಾ ಕೇಂದ್ರದ ಇಲಾಖಾ ಕಚೇರಿಗೆ ಹೋಗಿ ಮನವಿ ಮಾಡಿದರೆ ತೆಗ್ಗು ಗುಂಡಿ ಮುಚ್ಚಲು ನಮ್ಮ ಹತ್ತಿರ ಹಣವಿಲ್ಲ ಎಂದು ಹೇಳಿ ಕಳಿಸುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳಾದ ರಾಣಾ ಪ್ರತಾಪಸಿಂಣ್ ಮತ್ತು ಜಲರಾಮ್ ರಾಠೋಡ ಆರೋಪಿಸಿದ್ದಾರೆ. ಈ ರಸ್ತೆಯ ಪಕ್ಕದಲ್ಲಿಯೇ ನೀರು ಹರಿಯುವ ದೊಡ್ಡದಾದ ಕೆನಾಲ್ ಇರುವುದರಿಂದ ಆದಷ್ಟು ಬೇಗ ಈ ತೆಗ್ಗು ಗುಂಡಿ ಮುಚ್ಚದೆ ಹೋದಲ್ಲಿ ರಸ್ತೆಗೆ ಹೊಂದಿಕೊಂಡಿರುವ ಕೆನಾಲ್ ಒಡೆದು ಇಡೀ ರಸ್ತೆ ಸಂಪರ್ಕ ಕಡಿತಗೊಳ್ಳುವ ಅಪಾಯವಿದೆ. ಇಲ್ಲದಿದ್ದರೆ ರಾಸ್ತಾ ರೋಖೋ ಚಳವಳಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ದ.ಸಂ.ಸಮಿತಿ ಪದಾಧಿಕಾರಿಗಳು
ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ತಾಲೂಕು ಶಾಖೆ ಹಾಗೂ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು. ಸಂಚಾಲಕ ನಾಗಣ್ಣ ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಚಾಲಕ ರಾಮಣ್ಣ ಕಲ್ಲದೇವರಹಳ್ಳಿ, ರಾಜು ಅಣಬಿ, ಮರಳಸಿದ್ದ ಇದ್ದರು. ತಾಲೂಕು ಘಟಕಕ್ಕೆ ಕಾಶೀನಾಥ ಕಣೇಕಲ್ (ಪ್ರಧಾನ ಸಂಚಾಲಕ), ಆಂಜನೇಯ ಕೌಳೂರ, ರಾಮು ಗಿರೆಪ್ಪನೋರ, ಸಿದ್ದು ಕಣೇಕಲ್, ಮೌನೇಶ ಮುನಿಯಪ್ಪನೋರ, ಅಮಾತಯ್ಯ ಕುಡ್ಲೂರ (ಸಂಘಟನಾ ಸಂಚಾಲಕ), ತಿಮ್ಮಯ್ಯ ನಾಟೇಕರ (ಖಜಾಂಚಿ). ವಿದ್ಯಾರ್ಥಿ ಒಕ್ಕೂಟಕ್ಕೆ ಸಂತೋಷಕುಮಾರ ಬೆಳಗೇರಾ (ಪ್ರಧಾನ ಸಂಚಾಲಕ), ಶರಣು ನಾಟೇಕಾರ, ಅಶೋಕ ಕಣಜಿಕರ, ಮಲ್ಲು ಗಾಜರಕೋಟ, ಶರಣು ಹೊನಗೇರಾ, ಮಲ್ಲು ಕಟಗಿಶಹಾಪುರ (ಸಂಚಾಲಕ), ಮಲ್ಲು ಹೊನಗೇರಾ(ಖಜಾಂಚಿ)ಯಾಗಿ ನೇಮಕ ಮಾಡಲಾಯಿತು.