ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗ ನಗರ ಬಚ್ಚಲು ಮನೆ!

Lingaraj Badiger
Updated On : 15 Jul 2013, 11:13 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.14
ನಗರದ ನಿವಾಸಿಗಳ ದುರಾದೃಷ್ಟ, ಇಲ್ಲಿ ಮಳೆ ಬಂದರೂ ತೊಂದರೆ, ಬಾರದಿದ್ದರೂ ತೊಂದರೆ. ಮಳೆ ಬಾರದಿದ್ದರೆ ರೈತರು ಮುಗಿಲು ನೋಡುತ್ತ ಪರಿತಪಿಸುತ್ತಾರೆ. ಮಳೆ ಕೋಡಿಯಾಗಿ ಸುರಿದರೆ ಪಟ್ಟಣ/ನಗರವಾಸಿಗಳು ಚರಂಡಿ, ರಸ್ತೆ ಕುಳಿ ನೋಡುತ್ತ ಕೈಯಲ್ಲೇ ಜೀವ ಹಿಡಿದು ನಡೆದಾಡುತ್ತಾರೆ. ಅನೇಕ ಬಾರಿ ಕುಳಿಗಳಲ್ಲಿ, ರಸ್ತೆ ಪಕ್ಕದ ಹಳ್ಳಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡೇ ಮನೆ ಸೇರುತ್ತಾರೆ.
ಇಂತಹ ದುರವಸ್ಥೆಗೆಲ್ಲ ಇಲ್ಲಿನ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಗಳೇ ಖುದ್ದು ವ್ಯವಸ್ಥೆ ಮಾಡಿವೆ ಎಂದರೆ ಹುಬ್ಬೇರಿಸಬೇಡಿ!. ನಗರದಲ್ಲಿ ಪ್ರಮುಖ ಸಂಪರ್ಕ ರಸ್ತೆಗಳು, ಬಡಾವಣೆಗಳ ಆಂತರಿಕ ಸಂಪರ್ಕ ರಸ್ತೆಗಳೆಲ್ಲ ಹದಗೆಟ್ಟು ವರ್ಷಗಳೇ ಉರುಳಿದರೂ ಇಂದಿಗೂ ಬುಟ್ಟಿ ಮುರುಮ್ ಹಾಕಲೂ ಗತಿ ಇಲ್ಲದಂತಾಗಿರುವುದು ದುರಂತ.
ರಸ್ತೆಗಿಳಿದ ಮಳೆ ನೀರು: ಜೇವರ್ಗಿ ಕ್ರಾಸ್- ಆನಂದ ಹೋಟೆಲ್ ರಸ್ತೆ(ವಿಠ್ಠಲ್ ನಗರ ಕ್ರಾಸ್), ಜೇವರ್ಗಿ ಕಾಲೋನಿ ಮೂಲಕ ಸಾಗುವ ರೇಲ್ವೆ ಕೆಳ ಸೇತುವೆ- ರಾಮಮಂದಿರ ವೃತ್ತ ರಸ್ತೆ, ಲಾಲಗೇರಿ ಕ್ರಾಸ್ ರಸ್ತೆ, ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲೋನಿ- ಎಂಎಸ್ಕೆ ಮಿಲ್ ರಸ್ತೆ, ಕೇಂದ್ರ ಬಸ್ ನಿಲ್ದಾಣದಿಂದ ವಡ್ಡರಗಲ್ಲಿ ಮಾರ್ಗವಾಗಿ ಸಮತಾ ಕಾಲೋನಿ, ಬ್ರಹ್ಮಪುರ ಸಂಪರ್ಕ ರಸ್ತೆ, ಕೈಲಾಸ ನಗರ- ಖಾದ್ರಿ ಚೌಕ್ ರಸ್ತೆ, ವಿದ್ಯಾನಗರದ ಎಲ್ಲಾ ಒಳ ರಸ್ತೆಗಳು(ಇವುಗಳಲ್ಲೇ ಬಸ್, ಭಾರಿ ವಾಹನಗಳು ಸಾಗುತ್ತವೆ), ರಾಮನಗರ- ಇಂದಿರಾನಗರ- ಕೋರ್ಟ್ ಸಂಪರ್ಕ ರಸ್ತೆ... ಒಂದೇ ಎರಡೇ... ಎಲ್ಲಾ ರಸ್ತೆಗಳು ಹದಗೆಟ್ಟರೂ ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಇತ್ತ ಕ್ಯಾರೇ ಎನ್ನುತ್ತಿಲ್ಲ.
ಚುನಾವಣೆ ಮುಗಿದು 6 ತಿಂಗಳು ಉರುಳಿದರೂ ಇಂದಿಗೂ ನಮ್ಮ ಪುರಪಿತೃಗಳು ಪಾಲಿಕೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿಲ್ಲ. ಸರ್ಕಾರ ಸುತ್ತೋಲೆ ಹೊರಡಿಸಿ ಹೊಸ ಪಾಲಿಕೆ ರಚನೆಯನ್ನೇ ಮಾಡಿಲ್ಲ. ಹೀಗಾಗಿ ಪಾಲಿಕೆಯಲ್ಲಿ 13ನೇ ಹಣಕಾಸು ಹಾಗೂ ಇತರೆ ಮೂಲಗಳಿಂದ ಮತ್ತು ಜನರ ತೆರಿಗೆಯಿಂದ ಸಂಗ್ರಹವಾಗಿರುವ ಬಹುಕೋಟಿ ರುಪಾಯಿ ಹಣವಿದ್ದರೂ ಅದ್ಯಾವುದೂ ಇಂದಿಗೂ ವೆಚ್ಚವಾಗದೆ ಜನತೆ ನಿತ್ಯವೂ ಮಳೆನೀರು ದಿಕ್ಕುತಪ್ಪಿ ರಸ್ತೆಗಳಲ್ಲೇ ಓಡಾಡುತ್ತಿವೆ.
ಮೃತ್ಯುಕೂಪ: ನಗರದಲ್ಲಿ ಕಳೆದ 5 ವರ್ಷಗಳ ಹಿಂದೆಯೇ ಮಂಜೂರಾಗಿರುವ ಸಿಎಂ ನಗರೋತ್ಥಾನ ಯೋಜನೆಯ ಹಣದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕೆಲಸಗಳು ಸಹ ನೆನೆಗುದಿಗೆ ಬಿದ್ದಿವೆ. ಈ ಪೈಕಿ ಜಗತ್ ವೃತ್ತದಲ್ಲಂತೂ ಈ ರಸ್ತೆ ಕಾಮಗಾರಿಯ ಕೊಡುಗೆ ರೂಪದಲ್ಲಿ ಬಹುದೊಡ್ಡ ಗಾತ್ರದ ತಗ್ಗು ಹುಟ್ಟಿಕೊಂಡು ಬೈಕ್- ಕಾರ್‌ಗಳ ಬೇಟೆಗೆ ಕಾದು ಕುಳಿತಿದೆ.
ನಿತ್ಯವೂ ಈ ಕುಳಿಯಲ್ಲಿ ಬೈಕ್- ವಾಹನಗಳು ಬಿದ್ದೆದ್ದು ಹೋಗುತ್ತಿದ್ದರೂ ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ನೋಡಿಲ್ಲ ಎಂದರೆ ಮೂಲ ಸೌಕರ್ಯದ ಕಾಳಜಿ ಮಾಡಬೇಕಾದ ಸಂಸ್ಥೆಗಳು ಜನಸೇವೆಗೆ ಅದೆಷ್ಟು ಲಕ್ಷ ಇಟ್ಟಿವೆ ಎಂಬುದರ ಅರಿವಾಗದೆ ಇರದು.
ಸಚಿವದ್ವಯರ ಮಾರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಗುಲ್ಬರ್ಗ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಇನ್ನೋರ್ವ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಎಲ್ಲರೂ ಜಗತ್ ವೃತ್ತದ ಈ ಮೃತ್ಯುಕೂಪದ ಅಕ್ಕಪಕ್ಕವೇ ಸಾಗಿ ಹೋಗುತ್ತಾರೆ. ಅತ್ತ ನೋಡಿದರೂ ಯಾಕೆ ಹೀಗೆ? ಇಲ್ಲೇಕೆ ಹೀಗಾಯ್ತು ಎಂದು ಪ್ರಶ್ನಿಸುವುದಾಗಲಿ, ಅದನ್ನು ಬೇಗ ದುರಸ್ತಿ ಮಾಡಿ ಸರಿರೂಪಕ್ಕೆ ತರುವಂತಹ ಕಾಳಜಿಯನ್ನಾಗಲಿ ಇಂದಿಗೂ ಪ್ರದರ್ಶಿಸಿಲ್ಲ.
ಶರಣಬಸವೇಶ್ವರ ಮಂದಿರ, ಪಟೇಲ್ ವೃತ್ತ- ಸ್ಟೇಷನ್ ರಸ್ತೆಯಂತೂ ಕುಂಟುತ್ತಲೇ ಸಾಗಿದೆ. ಕಳೆದೆರಡು ಶ್ರಾವಣ ತಿಂಗಳು ಕೆಸರಲ್ಲೇ ಸಾಗಿ ಶರಣರ ದರುಶನ ಪಡೆದಿದ್ದ ನಗರ ಭಕ್ತರು ಈ ವರ್ಷವೂ ಅದೇ ಕೆಸರು, ಅರ್ಧಮರ್ಧ ಕಾಮಗಾರಿಯಲ್ಲೇ ಸಾಗಿ ಹೋಗುವ ಅನಿವಾರ್ಯತೆ ಎದುರಿಸುವಂತಾಗಿದೆ.
ನಗರದಲ್ಲೇ ಇಂತಹ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕರಾಗಲಿ, ಅವರ ಬೆಂಬಲಿಗರಾಗಲಿ ಯಾರೊಬ್ಬರೂ ಹರಿದು ಹೋಗಿರುವ ಮೂಲ ಸೌಕರ್ಯಗಳನ್ನು ಪುನಃ ಸೃಷ್ಟಿಸುವ ಕೆಲಸಕ್ಕೆ ಮುತುವರ್ಜಿ ತೋರಿ ಕಾರ್ಯತತ್ಪರಾಗುತ್ತಿಲ್ಲ. ಪಾಲಿಕೆಯಂತೂ ಇದಾವುದು ತನಗೆ ಸಂಬಂಧಿಸಿದ್ದಲ್ಲ ಎಂದು ಹಾಯಾಗಿ ಕುಳಿತಿದೆ.
ಗುಲ್ಬರ್ಗ ಅಕ್ಷರಶಃ ಬಚ್ಚಲು ಮನೆಯಾಗಿದೆ. ನಗರವನ್ನು ಕಾಡುತ್ತಿರುವ ಈ ದುರವಸ್ಥೆ ಸುಧಾರಿಸುವುದೇ ಎಂದು ಶರಣಬಸವೇಶ್ವರ- ಖಾಜಾ ಬಂದೇ ನವಾಜರೇ ಈ ಪ್ರಶ್ನೆಗೆ ಉತ್ತರಿಸಬೇಕಷ್ಟೆ.

ಜಗತ್ ವೃತ್ತದಲ್ಲೊಂದು ಮೃತ್ಯುಕೂಪ!
ಗುಲ್ಬರ್ಗ: ಮಹಾನಗರದ ಜನ- ವಾಹನ ನಿಬಿಡ ಜಗತ್ ವೃತ್ತದ ನೋಟವಿದು. ಇಲ್ಲಿನ ಅಂಬೇಡ್ಕರ್ ಪ್ರತಿಮೆ ಭಾಗದಲ್ಲಿ ರಸ್ತೆಯ ಮಗ್ಗುಲಲ್ಲೇ ಬೃಹತ್ ಕ್ರಾಸ್ ಡ್ರೇನೇಜ್ (ಸಿಡಿ) ಕಾಮಗಾರಿ ಅರ್ಧಮರ್ಧ ಮಾಡಲಾಗಿದೆ. ಅದರಿಂದ ದೊಡ್ಡದಾದ ತಗ್ಗು ಅಲ್ಲಿ ಉಂಟಾಗಿದೆ. ಸಂಜೆ ಹೊತ್ತು, ಕತ್ತಲಲ್ಲಿ, ಮಳೆ ಬಂದಾಗೆಲ್ಲ ಇಲ್ಲಿ ಬೈಕ್, ಆಟೋಗಳು ಉರುಳಿ ಬಿದ್ದು ದುರಂತಗಳು ಸಂಭವಿಸುತ್ತಲೇ ಇವೆ. ಶುಕ್ರವಾರ ಸಂಜೆ ಬಿರುಸಿನ ಮಳೆ ಸುರಿದಾಗ ಬೈಕ್ ಸವಾರನೋರ್ವ ಆಯತಪ್ಪಿ ಇದೇ ತಗ್ಗಿಗೆ ಉರುಳಿದ. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು, ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿದ್ದರಿಂದ ಬಡಪಾಯಿ ಬಚಾವ್ ಆದ. ಇಷ್ಟೆಲ್ಲ ಅನಾಹುತಗಳು ನಿತ್ಯವೂ ಇಲ್ಲಿ ಸಂಭವಿಸುತ್ತಿದ್ದರೂ ಈ ಮೃತ್ಯುಕೂಪಕ್ಕೊಂದು ಸುರಕ್ಷಿತ ರೂಪ ಕೊಡುವ ಚಿಂತನೆ ಮಾತ್ರ ಇನ್ನೂ ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ ಮಾಡದೆ ಸುಮ್ಮನಿರುವುದು ದುರಂತವಲ್ಲದೆ ಮತ್ತೇನು.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement