ಚಿಮೂ ಹೇಳಿಕೆಗೆ ಜಿಲ್ಲಾ ಕಸಾಪ ಬೆಂಬಲ
ಯಾದಗಿರಿ: ದಾಸ್ಯದ ಸಂಕೇತವಾಗಿರುವ ಹೈದರಾಬಾದ್ ಕರ್ನಾಟಕ ಹೆಸರನ್ನು ಬದಲಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕೆಂಬ ಸಂಶೋಧಕ ಡಾ.ಚಿದಾನಂದಮೂರ್ತಿ ಅವರ ಹೇಳಿಕೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ಬೆಂಬಲಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಚಿಮೂ ಅವರು ಹೇಳಿಕೆ ನೀಡಿ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹ. ಆದರೆ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಆ.15ರೊಳಗೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಂವಿಧಾನದ 371ನೇ ಕಲಂ ಜಾರಿಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಹೆಸರು ಸೂಕ್ತವಾದದ್ದು. ಸರ್ಕಾರ ಶೀಘ್ರದಲ್ಲಿ ಕಲ್ಯಾಣ ಕರ್ನಾಟಕ ಹೆಸರನ್ನು ಘೋಷಿಸಬೇಕು ಎಂದು ಅಯ್ಯಣ್ಣ ಹುಂಡೇಕಾರ, ವಿ.ಸಿ. ರೆಡ್ಡಿ, ಬಸವಂತ್ರಾಯ ಮಾಲಿಪಾಟೀಲ, ಶ್ರೀನಿವಾಸ ಕರ್ಲಿ, ಡಾ. ಸುಭಾಶ್ಚಂದ್ರ ಕೌಲಗಿ ಇತರರು ಒತ್ತಾಯಿಸಿದ್ದಾರೆ.