ನಿಧಿಯಾಸೆಗಾಗಿ ದೇವಳದ ಕಂಬ ಕಿತ್ತರು
ಯಾದಗಿರಿ: ಐತಿಹಾಸಿಕ ಸ್ಮಾರಕಗಳ ಮೇಲೆ ನಿಧಿಗಳ್ಳರ ಕಾಟ ಜಾಸ್ತಿಯಾಗಿರುವ ಮಧ್ಯೆಯೇ ಶಹಾಪುರ ತಾಲೂಕಿನ ಕುರಕುಂದಿ ಗ್ರಾಮದ ಮೈಲಾರಜ್ಜನ ದೇವಸ್ಥಾನದ ಎದುರಿನ ಸರಪಳಿ ಹರಿಯುವ ಕಂಬವನ್ನು ನಿಧಿ ಆಸೆಗಾಗಿ ಕಿತ್ತು ಹಾಕಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಆದರೆ, ಆ ಸ್ಥಳದಲ್ಲಿ ಏನೂ ಸಿಗದೇ ನಿಧಿಗಳ್ಳರ ಪ್ರಯತ್ನ ವಿಫಲವಾಗಿದೆ.
ಅತ್ಯಂತ ಪುರಾತನವಾದ ಮೈಲಾರಜ್ಜನ ದೇವಸ್ಥಾನದಲ್ಲಿ ನಿಧಿ ಇರಬಹುದು ಎಂಬ ಅಂದಾಜಿನ ಮೇಲೆ ಕಳ್ಳರು ಸರಪಳಿ ಕಂಬವನ್ನು ಬುಡಸಮೇತ ಕಿತ್ತಿದ್ದಾರೆ. ಭಾನುವಾರ ಭಕ್ತರು ದೇವರ ದರ್ಶನಕ್ಕೆ ಬಂದ ಸಂದರ್ಭದಲ್ಲಿ ನಿಧಿಗಳ್ಳರು ನಡೆಸಿದ ಈ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 3 ಅಡಿ ಆಳ ಹಾಗೂ 5 ಅಡಿ ಅಗಲದ ಗುಂಡಿ ತೋಡಿ ನಿಧಿಗಾಗಿ ಹುಡುಕಾಡಿದ ಕುರುಹು ಕಂಡುಬಂದಿದೆ. ಈ ಘಟನೆಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಈ ಕೃತ್ಯವನ್ನು ಯಾರು ಮಾಡಿದ್ದಾರೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಐತಿಹಾಸಿಕ ಹಾಗೂ ಪುರಾತನವಾದ ಅನೇಕ ಸ್ಮಾರಕಗಳಿವೆ. ಆದರೆ ಅವು ನಿಧಿಗಳ್ಳರ ವಕ್ರದೃಷ್ಟಿಗೆ ಬಿದ್ದು ಹಾಳಾಗುತ್ತಿವೆ. ಆದ್ದರಿಂದ ಈ ನಿಟ್ಟಿನಲ್ಲಿ ಸ್ಮಾರಕಗಳ ರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕು ಎಂದು ಗ್ರಾಮಸ್ಥರಾದ ಶರಣಗೌಡ, ಮಲ್ಲನಗೌಡ ಇತರರು ಒತ್ತಾಯಿಸಿದ್ದಾರೆ. ಪ್ರತಿವರ್ಷ ದಸರಾ ಸಂದರ್ಭದಲ್ಲಿ ಕುರಕುಂದಿ ಗ್ರಾಮದ ಮೈಲಾರಜ್ಜನ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.