ಯಾದಗಿರಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ತೆರೆಮರೆಯಲ್ಲಿ ಕಸರತ್ತು
ಕನ್ನಡಪ್ರಭ ವಾರ್ತೆ, ಯಾದಗಿರಿ, ಜು.14
ಇಲ್ಲಿಯ ಜಿಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿ ಮೊದಲಾರ್ಧದ 10 ತಿಂಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕಾಗಿ ಕಾಂಗ್ರೆಸ್ ಸದಸ್ಯರಿಂದ ಮತ್ತೆ ತೆರೆಮರೆಯಲ್ಲಿ ಕಸರತ್ತು ಆರಂಭಗೊಂಡಿದೆ. ಸದ್ಯ ಅಧ್ಯಕ್ಷರಾಗಿರುವ ಮರೆಮ್ಮ ಶಾಣ್ಯಾನೋರ್ ಅವರಿಂದ ರಾಜಿನಾಮೆ ಕೊಡಿಸಲು ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.
ಇಬ್ಬರು ಅಭ್ಯರ್ಥಿಗಳು: ಜಿಪಂನಲ್ಲಿ ಬಹುಮತವಿರುವ ಕಾಂಗ್ರೆಸ್ನಲ್ಲಿ ಈಗ ಅಧ್ಯಕ್ಷ ಸ್ಥಾನಕ್ಕಾಗಿ ಕಸರತ್ತು ತೀವ್ರಗೊಂಡಿದೆ. ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾತಿ ನಿಗದಿಯಾಗಿದೆ. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿರುವುದರಿಂದ ಅದಕ್ಕೆ ಅರ್ಹರಾದ ಇಬ್ಬರು ಮಾತ್ರ ಕಾಂಗ್ರೆಸ್ನಲ್ಲಿದ್ದಾರೆ. ದೋರನಹಳ್ಳಿ ಕ್ಷೇತ್ರದ ಮರೆಮ್ಮ ಶಂಕ್ರೆಪ್ಪ ಶಾಣ್ಯಾನೋರ್ ಹಾಗೂ ಪುಟಪಾಕ್ ಕ್ಷೇತ್ರದ ಭೀಮಮ್ಮ ಕೃಷ್ಣಪ್ಪ ಮಾತ್ರ ಅರ್ಹರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಹೆಚ್ಚಿದ ಹಿನ್ನೆಲೆಯಲ್ಲಿ 20 ತಿಂಗಳಲ್ಲಿ ಇಬ್ಬರಿಗೆ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಖಂಡರು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಸೆ. 29ರಂದು ನಡೆದ ಚುನಾವಣೆಯಲ್ಲಿ ಮರೆಮ್ಮ ಶಾಣ್ಯಾನೋರ್ ಅವರಿಗೆ ಮೊದಲಾರ್ಧದ 10 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈಗ ಆ ಅವಧಿ ಮುಗಿಯುತ್ತಿದ್ದು, ಅವರಿಂದ ರಾಜಿನಾಮೆ ಪಡೆಯಲು ಕಾಂಗ್ರೆಸ್ನಲ್ಲಿ ಒತ್ತಡ ಹೆಚ್ಚುತ್ತಿದೆ.
ಭೀಮಮ್ಮ ಮುಂದಿನ ಅಧ್ಯಕ್ಷೆ?: ಗುರುಮಠಕಲ್ ಭಾಗದ ಪುಟಪಾಕ್ ಕ್ಷೇತ್ರದ ಭೀಮಮ್ಮ ಕೃಷ್ಣಪ್ಪ ಅವರು ಮುಂದಿನ 10 ತಿಂಗಳ ಅವಧಿಗಾಗಿ ಅಧ್ಯಕ್ಷ ಸ್ಥಾನಕ್ಕೇರಲು ತೀವ್ರ ಪೈಪೋಟಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್ ಅವರಿಗೆ ಸದಸ್ಯೆ ಭೀಮಮ್ಮ ಅವರ ಪತಿ ಕೃಷ್ಣಪ್ಪ ಆಪ್ತರಾಗಿರುವುದರಿಂದ ಶಾಣ್ಯಾನೋರ್ ಅವರಿಂದ ರಾಜಿನಾಮೆ ಕೊಡಿಸುವ ತಂತ್ರಕ್ಕೆ ಫಲ ದೊರೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮರೆಮ್ಮ ಶಾಣ್ಯಾನೋರ್ ವಾರದೊಳಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಮತ್ತೆ ಚುನಾವಣೆ ಜರುಗಲಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಸದಸ್ಯೆ ಭೀಮಮ್ಮ ಜಿಪಂ ಅಧ್ಯಕ್ಷ ಗದ್ದುಗೆ ಏರಲಿದ್ದಾರೆ.
ಉತ್ತಮ ಬಾಂಧವ್ಯ: ಉಪಾಧ್ಯಕ್ಷರಾಗಿರುವ ಶರಣಿಕಕುಮಾರ ದೋಖಾ ಅವರಿಗೆ ಸದ್ಯ ರಾಜಿನಾಮೆಗೆ ಒತ್ತಡವಿಲ್ಲ. ಅಲ್ಲದೇ ಸಚಿವ ಚಿಂಚನಸೂರ ಅವರ ಪಕ್ಕಾ ಬೆಂಬಲಿಗರಾಗಿರುವ ಹಾಗೂ ಎಲ್ಲಾ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಿನ್ನೆಲೆಯಲ್ಲಿ ದೋಖಾ ರಾಜಿನಾಮೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಒಪ್ಪಂದದಂತೆ 10 ತಿಂಗಳ ಬಳಿಕ ರಾಜಿನಾಮೆ ಕೊಡಬೇಕು ಎಂದು ಪಕ್ಷದ ನಾಯಕರು ಸೂಚಿಸಿದಲ್ಲಿ ಆ ಸ್ಥಾನಕ್ಕೆ ಕೆಂಭಾವಿ ಕ್ಷೇತ್ರದ ಸಿದ್ದನಗೌಡ ಪೊಲೀಸ್ ಪಾಟೀಲ ಆಕ್ಷಾಂಕಿಯಾಗಿದ್ದಾರೆ. ಆದರೆ ಉಪಾಧ್ಯಕ್ಷರ ರಾಜಿನಾಮೆ ಬಗ್ಗೆ ಸದ್ಯ ಕಾಂಗ್ರೆಸ್ ಸದಸ್ಯರಿಂದ ಯಾವುದೇ ಒತ್ತಡ ಕೇಳಿಬರುತ್ತಿಲ್ಲ. ಆದರೆ ತೆರೆಮರೆಯಲ್ಲಿ ನಡೆಯುತ್ತಿರುವ ಈ ಕಸರತ್ತಿನ ಬಗ್ಗೆ ಯಾರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲವಾದರೂ, ಇದನ್ನು ಖಚಿತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾರದೊಳಗೆ ಮರೆಮ್ಮ ಶಾಣ್ಯಾನೋರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ.