ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಸ್ತಾಂತರಗೊಳ್ಳದ ಆಸರೆ, ಅತ್ರಂತ್ರ ಫಲಾನುಭವಿಗಳು

Lingaraj Badiger
Updated On : 15 Jul 2013, 11:18 am

- ಮಲ್ಲು ಗುಳಗಿ
ಕನ್ನಡಪ್ರಭ ವಾರ್ತೆ  ಸುರಪುರ  ಜು.14
ಕೃಷ್ಣಾ ನದಿ ಪ್ರವಾಹದಿಂದ ನದಿ ದಂಡೆಯ ಹತ್ತಿರದಲ್ಲಿರುವ ತಾಲೂಕಿನ ಹೊಸೂರು ಪೈದೊಡ್ಡಿ ಗ್ರಾಮ ಪದೇ ಪದೇ ಮುಳುಗಡೆಯಾಗುತ್ತಿದ್ದವು.
  2009ರಲ್ಲಿ ನೆರೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಆಸರೆ ಕಲ್ಪಿಸಲು ವಿಪ್ರೋ ಕಂಪನಿ ಆಶ್ರಯದಲ್ಲಿ ನಿರ್ಮಾಣ ಮಾಡಿರುವ 111 ಮನೆಗಳು ಹಸ್ತಾಂತರಗೊಳ್ಳದೇ, ಫಲಾನುಭವಿಗಳು ಅತಂತ್ರರಾಗಿದ್ದಾರೆ.
 ಸುರಪುರ ತಾಲೂಕಿನಲ್ಲಿ 2009, ಸೆ.30ರಲ್ಲಿ ಸತತವಾಗಿ ನಾಲ್ಕೈದು ದಿನ ಮಳೆ ಹಾಗೂ ಭೀಕರ ಪ್ರವಾಹದಿಂದ ತಿಂಥಣಿ, ಬಂಡೋಳ್ಳಿ, ಉಪಲದಿನ್ನಿ, ಹೊಸೂರು ಪೈದೊಡ್ಡಿ ಸೇರಿದಂತೆ ಸುಮಾರು 9 ಗ್ರಾಮಗಳು  ಜಲಾವೃತಗೊಂಡವು. ಆ ಸಂದರ್ಭದಲ್ಲಿ ಆ ಗ್ರಾಮಗಳ ಸಾವಿರಾರು ಕುಟುಂಬಗಳು ಗ್ರಾಮವನ್ನೇ ತೊರೆದಿದ್ದರು. ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದವು.
 ಆ ಸಮಯದಲ್ಲಿ ಶಾಸಕ ರಾಜುಗೌಡರು ಚೌಡೇಶ್ವರಿಹಾಳ ಗ್ರಾಮದ ಹತ್ತಿರ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಿದರಲ್ಲದೆ 9 ಗ್ರಾಮಗಳ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆಗೆದು ಹಗಲಿರುಳು ಶ್ರಮಿಸಿದ್ದರು.
ನಲುಗಿದ ಬದುಕು: ನಿರಾಶ್ರಿತರಿಗೆ ಪ್ರತಿ ವರ್ಷ ಪ್ರವಾಹಕ್ಕೆ ಸಿಲುಕಿ ನಲುಗುತ್ತಿರುವ ಬಗ್ಗೆ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಮನವರಿಕೆ ಮಾಡಿದರಲ್ಲದೆ, ತಿಂಥಣಿ ಬಂಡೋಳ್ಳಿಯಲ್ಲಿ ನಿರಾಶ್ರಿತರಿಗೆ ಸರ್ಕಾರದಿಂದ ಮನೆಗಳನ್ನು ನಿರ್ಮಿಸಿ ಹಂಚಿಕೆ ಕೂಡಾ ಮಾಡಲಾಗಿದೆ.
 ಆದರೆ ಹೊಸೂರು ಪೈದೊಡ್ಡಿಯಲ್ಲಿ ಸುಮಾರು 175 ಮನೆಗಳನ್ನು ನಿರ್ಮಿಸಬೇಕಾಗಿತ್ತು. ಅದಕ್ಕಾಗಿ 18 ಎಕರೆ ಜಮೀನು ಖರೀದಿಸಬೇಕಾಗಿತ್ತು. ಆದರೆ 12 ಎಕರೆ ಜಮೀನನ್ನು ಸರ್ಕಾರ ಖರೀದಿಸಿತು. ಉಳಿದ 6 ಎಕರೆ ಜಮೀನಿನ ಕೊರತೆಯಿಂದ ಉಳಿದ 64 ಮನೆಗಳು ಕೂಡಾ ನೆನೆಗುದಿಗೆ ಬಿದ್ದಿವೆ ಎನ್ನಲಾಗಿದೆ.
ಕಿಟಕಿ, ಬಾಗಿಲುಗಳನ್ನು ಮುರಿದರು: ಖಾಸಗಿ ಸಂಸ್ಥೆಯವರು ಮುಂದೆ ಬಂದು ನಿರಾಶ್ರಿತರಿಗೆ 111 ಮನೆಗಳ ಸುಸಜ್ಜಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆ ಮನೆಗಳನ್ನು ಹಂಚಿಕೆ ಮಾಡದಿರುವುದರಿಂದ ಕೆಲ ಕಿಡಿಗೇಡಿಗಳು ಶೌಚಾಲಯ, ಸ್ನಾನದ ಕೋಣೆಯ ಕಿಟಕಿ, ಬಾಗಿಲುಗಳನ್ನು ಮುರಿದು ಹಾಕಿದ್ದಾರೆ. ಇನ್ನು ಕೆಲವರು ಜೂಜಾಟ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಮಳೆಗಾಲ ಮುಂಚಿತವಾಗಿ ಹೊಸ ಮನೆಗಳಿಗೆ ಹೋಗುತ್ತವೆ.
  ನೆಮ್ಮದಿಯಿಂದ ವಾಸ ಮಾಡುತ್ತೇವೆ ಎಂಬ ಕನಸು ಕಂಡಿದ್ದ ನಿರಾಶ್ರಿತರಿಗೆ ಅದು ಕನಸಾಗಿಯೇ ಉಳಿದಿದೆ. ಅಧಿಕಾರಿಗಳು ಇನ್ನೂ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡದ್ದರಿಂದ ನಾಲ್ಕನೇ ವರ್ಷದ ಮಳೆಗಾಲವನ್ನೂ ಅತಂತ್ರರಾಗಿಯೇ ಕಳೆಯುವಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಈ ಮನೆಗಳ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕಿದೆ.
ನಿರ್ಮಾಣಗೊಂಡಿರುವ ಮನೆಗಳನ್ನು ಸಂತ್ರಸ್ತರಿಗೆ ನೀಡಿ, ಹಕ್ಕು ಪತ್ರ ವಿತರಿಸಬೇಕಿದೆ. ಉಳಿದ 6 ಎಕರೆ ಜಮೀನು ಖರೀದಿಸಿ ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುವ ಮುಂಚೆ ಉಳಿದ 64 ಮನೆಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಹಂಚುವರೇ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement