ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉಳ್ಳವರಿಗೆ ಆಶ್ರಯ ನಿವೇಶನ

Lingaraj Badiger
Updated On : 16 Jul 2013, 11:05 am

ಶಹಾಪುರ: ಪಾರದರ್ಶಕತೆ, ಸಾಮಾಜಿಕ ನ್ಯಾಯ, ದುರ್ಬಲರಿಗೆ ಸಹಕಾರ ಇದ್ಯಾವುದನ್ನೂ ಪಾಲಿಸದೇ ಆಶ್ರಯ ನಿವೇಶನಗಳನ್ನು ಮನಬಂದಂತೆ ವಿತರಣೆ ಮಾಡಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಮೊತ್ತಮ್ಮೆ ಈ ಕುರಿತು ಪರಿಶೀಲಿಸಿ ಸಮಾಜದಲ್ಲಿನ ದುರ್ಬಲರಿಗೆ ಸರ್ಕಾರದ ಯೋಜನೆ ತಲುಪುವಂತಾಗಲಿ ಎಂದು ಪ್ರಾದೇಶಿಕ ಆಯುಕ್ತರಿಗೆ ಶಾಸಕ ಗುರುಪಾಟೀಲ ಶಿರವಾಳ ಪತ್ರ ಬರೆದಿದ್ದಾರೆ.
ಪಟ್ಟಣದ ಬಸ್‌ನಿಲ್ದಾಣ ಹಿಂದೆ ಇರುವ ಆಶ್ರಯ ನಿವೇಶನಗಳು ಸದ್ಯ ಬೆಲೆ ಬಾಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ನಿವೇಶನ ಪಡೆದಿದ್ದಾರೆ.
ಪರಿಶಿಷ್ಟ ಜಾತಿಯವರಿಗೆ ಸೇರಬೇಕಾದ ನಿವೇಶನಗಳನ್ನು ಹಿಂದುಳಿದ ವರ್ಗದ ಕೆಲ ಪ್ರಭಾವಿಗಳಿಗೆ ನೀಡಲಾಗಿದೆ. ಸರ್ವೇ ನಂ.7ರ 11 ಎಕರೆಯಲ್ಲಿ 507 ನಿವೇಶನ ಮಾಡಿದ್ದು, ಅದರಲ್ಲಿ ಸರ್ಕಾರದ ನಿಯಮಗಳನ್ನೆ ಪಾಲಿಸದೆ ಹಂಚಿಕೆಯಾಗಿದೆ. ಅಲ್ಲದೇ ಉಳ್ಳವರಿಗೆ ಆಶ್ರಯ ನಿವೇಶನ ತಲುಪಿರುವುದು ಕಂಡುಬಂದಿದೆ.
 ಕೆಲವು ಪ್ರಮುಖರು ಆಶ್ರಯ ನಿವೇಶನ ಪಡೆದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದ ದಾಖಲೆಗಳಲ್ಲಿ ಕಂಡು ಬಂದಿದ್ದು, ವಸತಿ ಯೋಜನೆ ವ್ಯವಸ್ಥೆ ಸಕ್ರಮವಾಗದೆ ಆಕ್ರಮವಾಗಿದೆ ಎಂಬುದು ಪುರಸಭೆಯ ಸದಸ್ಯರ ಆರೋಪವಾಗಿದೆ. ಆರ್ಥಿಕವಾಗಿ ಉತ್ತಮವಾಗಿರುವವರು ಬಡವರ ಸೂರನ್ನು ಕಸಿದುಕೊಂಡಿದ್ದು, ಹಳ್ಳಿಗಳಲ್ಲಿ ಮನೆ, ಭೂಮಿ ಇದ್ದ ಕೆಲವರು ನಿವೇಶನ ಪಡೆದುಕೊಂಡು ಸರ್ಕಾರದ ಯೋಜನೆ ವಿಫಲತೆಗೆ ಸಾಕ್ಷಿಯಾಗಿದ್ದಾರೆ.
ಇನ್ನು ಕೆಲವು ಸೂರಿಲ್ಲದ ಬಡವರು ಹಕ್ಕು ಪತ್ರ ಪಡೆದು ಮನೆ ನಿರ್ಮಾಣವನ್ನು ಮಾಡುವದನ್ನು ಬಿಟ್ಟು ಕೆಲವರಿಗೆ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಅಂಥವರ ವಿರುದ್ಧವೂ ಸಮಗ್ರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ಸರ್ಕಾರ ಪಟ್ಟಣದ ಆಶ್ರಯ ಯೋಜನೆ ನಿವೇಶನ ಕುರಿತಂತೆ ನಿಷ್ಕಾಳಜಿ ವಹಿಸದೆ ತನಿಖೆ ನಡೆಸಬೇಕು ಎಂದು ಪುರಸಭೆ ಸದಸ್ಯ ವಸಂತ ಸುರಪುರ, ಸಂತೋಷ ಗುತ್ತೇದಾರ, ದೊಡ್ಡ ಮಾನಯ್ಯ ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement