ರಂಗಾಯಣದ ಕೇಂದ್ರ ಸ್ಥಾಪನೆಗೆ ಸ್ವಾಗತ
ಗುಲ್ಬರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಗುಲ್ಬರ್ಗದಲ್ಲಿ ರಂಗಾಯಣದ ಕೇಂದ್ರವನ್ನು ಪ್ರಾರಂಭಿಸಲು 1 ಕೋಟಿ ಕಾಯ್ದಿರಿಸಿರುವುದು ಸಮುದಾಯದ ಕಲಬುರಗಿ ಘಟಕವು ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ.
ಈ ಭಾಗದ ಬಹುದಿನದ ಬೇಡಿಕೆಯಾಗಿರುವ ರಂಗಾಯಣದ ಶಾಖೆಯನ್ನು ಗುಲ್ಬರ್ಗದಲ್ಲಿ ಪ್ರಾರಂಭಿಸಬೇಕೆಂದು ಹಲವು ಹೋರಾಟಗಳನ್ನು ಮಾಡಿದ್ದರಿಂದ ಸಮುದಾಯದ ದಶಕದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದೆ.
ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮವನ್ನು ಕೊಡುವಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ರಂಗಾಯಣದ ಪಾತ್ರ ಪ್ರಧಾನವಾಗಿದ್ದು, ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಲು ರಂಗಾಯಣದ ಶಾಖೆ ಸ್ಥಾಪಿಸಲು ಹೊರಟಿರುವುದು ಗುಲ್ಬರ್ಗದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ಸಮುದಾಯದ ರಾಜ್ಯಾಧ್ಯಕ್ಷ ಆರ್.ಕೆ. ಹುಡಗಿ, ಜನವಾದಿ ಮಹಿಳಾ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಅಧ್ಯಕ್ಷ ಡಾ. ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪುರೆ, ನಾಗೇಂದ್ರಪ್ಪ ಅವರಾದ, ಡಾ. ಕಾಶಿನಾಥ ಅಂಬಲಗಿ, ಕೋದಂಡರಾಮಪ್ಪ, ವಸ್ತ್ರದ್, ಶ್ರೀಶೈಲ್ ಗೂಳಿ, ಸಮುದಾಯದ ಜಿಲ್ಲಾಧ್ಯಕ್ಷ ಅಶೋಕ ಶೆಟಗಾರ್, ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಸೈದಾಪುರ ಅಭಿಪ್ರಾಯಪಟ್ಟಿದ್ದಾರೆ.
ರಂಗಾಸಕ್ತರ ಸಂತಸ(ಸೇಡಂ ವರದಿ): ಮುಖ್ಯಮಂತ್ರಿ ಗುಲ್ಬರ್ಗದಲ್ಲಿ ರಂಗಾಯಣ ಘಟಕ ಸ್ಥಾಪಿಸಲು ಒಂದು ಕೋಟಿ ರು. ಬಜೆಟ್ ಮಂಡನೆ ಮಾಡಿರುವುದನ್ನು ರಂಗಕರ್ಮಿ, ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ, ತಿಂಗಳ ಸಂಜೆ ವೇದಿಕೆ ಅಧ್ಯಕ್ಷ ಚಂದ್ರಶೇಖರ ಆಡಕಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ.