ಹೆಸರು, ತೊಗರಿ ಬಿತ್ತನೆ: ಕೃಷಿ ಕಾರ್ಯ ಚುರುಕು
ಯಾದಗಿರಿ: ಒಂದು ವಾರದಿಂದ ಜಿಲ್ಲೆಯಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಕಾರ್ಯ ಚುರುಕುಪಡೆದುಕೊಳ್ಳುವಂತೆ ಮಾಡಿದೆ. ರೈತರು ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಬಿತ್ತನೆಯಲ್ಲಿ ಮಗ್ನರಾಗಿದ್ದಾರೆ.
ಇಲ್ಲಿಗೆ ಸಮೀಪದ ದೋರನಹಳ್ಳಿ, ಕುರುಕುಂದಾ, ವಡಗೇರಾ, ಬೆಂಡೆಬೆಂಬಳಿ, ಶಹಾಪುರ ತಾಲೂಕಿನ ಮಾಚನೂರ, ಬಿಳ್ಹಾರ, ಕೋನಳ್ಳಿ, ಹಾಲಗೇರಾ, ಉಳ್ಳೆಸೂಗೂರು, ಮಳ್ಳಳ್ಳಿ, ತುಮಕೂರ, ಕೊಂಕಲ್, ಚೆನ್ನೂರ, ಐಕೂರ, ಹಯ್ಯಾಳ, ಅನಸುಗೂರ, ಐಕೂರ, ನಾಯ್ಕಲ್, ಚಟ್ನಳ್ಳಿ, ಇಬ್ರಾಹಿಂಪುರ, ಗುರುಸಣಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರೈತ ಕುಟುಂಬಗಳು ದಿನವಿಡೀ ಹೊಲದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯ್ಕಲ್ ಸುತ್ತಮುತ್ತಲ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಹೆಸರು, ಹತ್ತಿ ಹೊಲಗಳಲ್ಲಿ ಬೆಳೆದ ಕಳೆ ಕೀಳುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ಬೆಳೆ ಹುಲುಸಾಗಿ ಬೆಳೆಯಲು ರೈತರು ಹೊಲಗಳಲ್ಲಿ ಎಡೆ ಹೊಡೆಯುತ್ತಿದ್ದಾರೆ.
ಕೆಲ ಕಡೆಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದ್ದರೆ, ಇನ್ನು ಕೆಲ ಕಡೆಗಳಲ್ಲಿ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಏನ್ ಮಾಡೋದ್ರೀ, ಮುಂಗಾರು ಬಿತ್ತನೆಗೆ ಮಳೆರಾಯ ಸಕಾಲಕ್ಕೆ ಕರುಣೆ ತೋರಲಿಲ್ಲ. ಒಣ ಮಣ್ಯಾಗ್ ಬಿತ್ತನೆ ಮಾಡಿದ ಹೊಲಗಳಲ್ಲಿ ಬೆಳೆಗಳು ನಾಟಿವೆ. ಈಚಿಗೆ ಸುರಿದ ಜಿಟಿಜಿಟಿ ಮಳೆಯಿಂದ ಬಿತ್ತನೆ ಮಾಡಲಿಲ್ಲ. ಈಗ ಮಳೆರಾಯ ಬಿಡು ಕೊಟ್ಟಾನರಿ. ಈಗ ಬೀಜ ಬಿತ್ತನೆ ಮಾಡಕತ್ತೀವ್ರೀ ಎಂದು ವಡಗೇರಾ ಗ್ರಾಮದ ರೈತ ಬಸವರಾಜ ಹೇಳುತ್ತಾರೆ.
ಮಳೆ ನಿರೀಕ್ಷೆ ಇಟ್ಟುಕೊಂಡು ಒಣ ಮಣ್ಣಿನಲ್ಲಿ ಬಿತ್ತನೆ ಮಾಡಿದ್ದ ಹೊಲಗಳಲ್ಲಿ ಈಗ ಸಸಿ ಬೆಳೆಯತೊಡಗಿದೆ. ಆದರೆ ಅಲ್ಲಿ ಕಳೆ ಬಂದಿದ್ದರಿಂದ ರೈತ ಕುಟುಂಬದ ಎಲ್ಲ ಸದಸ್ಯರು ಕಳೆ ಕೀಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೆಸರು ಬೆಳೆ ಹುಲುಸಾಗಿ ಬೆಳೆಯಲು ಎಡೆ ಹೊಡೆಯುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆ ತೇವಾಂಶ ಹೆಚ್ಚಿಸಿದ್ದು, ಪರಿಸರ ಹಸಿರಾಗುವಂತೆ ಮಾಡಿದೆ.