ಇಂದು ಫೋನ್- ಇನ್ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ಜು.17ರಂದು ಸಂಜೆ 5.30ರಿಂದ 6ರವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ರೈತ ಬಾಂಧವರಿಗಾಗಿ ನೇರ ಫೋನ್- ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.ಸೂರ್ಯಕಾಂತಿ ಬೆಳೆಯಲ್ಲಿ ಅಧಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಗುಲ್ಬರ್ಗ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ.ಎಂ. ದೊಡ್ಡಮನಿ ಮಾಹಿತಿ ನೀಡಲಿದ್ದಾರೆ. ಡಾ. ಪಂಡಿತ ರಾಠೋಡ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಕೆ.ಆರ್. ಶ್ರೀನಿವಾಸ ಕಾರ್ಯಕ್ರಮ ಪಸ್ತುತ ಪಡಿಸಲಿದ್ದಾರೆ. 220491, 220492 ದೂರವಾಣಿ ಸಂಖ್ಯೆಗಳಿಗೆ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರದ ಸಹಾಯಕ ನಿರ್ದೇಶಕ ಪಾಟೀಲ್ ತಿಳಿಸಿದ್ದಾರೆ.
ಇಬ್ಬರು ಪೇದೆಗಳ ಅಮಾನತು
ಗುಲ್ಬರ್ಗ: ನಗರದ ಜಿಲ್ಲಾ ಆಸ್ಪತ್ರೆ ಬಳಿ ಈಚೇಗೆ ಒಬ್ಬ ವಿದ್ಯಾರ್ಥಿಯನ್ನು ಟ್ರಾಫಿಕ್ ಪೊಲೀಸ್ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆ ಪೇದೆ ಮಂಜುನಾಥಗೌಡ ಪಾಟೀಲ್ ಮತ್ತು ಅವರಿಗೆ ಸಹಕಾರ ನೀಡಿದರೆನ್ನಲಾದ ಅಬಕಾರಿ ಮತ್ತು ಲಾಟರಿ ಜಾರಿ ಜಾಗೃತದಳದ ಪೇದೆ ಆನಂದ ಎಂಬುವರನ್ನು ಅಮಾನತುಗೊಳಿಸಿದ್ದಾರೆ.
ಟೆಲಿಗ್ರಾಂಗೆ ವಿದಾಯ
ಗುಲ್ಬರ್ಗ: ಟೆಲಿಗ್ರಾಂ ಸೇವೆ ಭಾನುವಾರ ರಾತ್ರಿಯಿಂದ ಸ್ಥಗಿತಗೊಳ್ಳಲಿದೆ ಎನ್ನುವ ಸುದ್ದಿಗೆ ಎಚ್ಚೆತ್ತುಕೊಂಡ ನಗರದ 12 ಮಂದಿ ಅಂತಿಮ ಸಂದೇಶ ರವಾನಿಸಿ ಭಾವಪೂರ್ಣ ವಿದಾಯ ಹೇಳಿದರು. ನಗರದಿಂದ ಭಾನುವಾರ ಒಟ್ಟು 12 ಟೆಲಿಗ್ರಾಂ ರವಾನೆಯಾಗಿದ್ದು, ಇವುಗಳಲ್ಲಿ ಎರಡು ಸಂದೇಶ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಕಳುಹಿಸಿರುವುದು ವಿಶೇಷ. ನಗರದ ನಿವಾಸಿಗಳಾದ ಕೇಶನ್ ದೋಶಿ ಹಾಗೂ ಡಾ. ರಾಜು ಕುಳಗೇರಿ ಅವರು ನೀವು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು ಎನ್ನುವ ಸಂದೇಶವನ್ನು ಪ್ರಣವ್ ಮುಖರ್ಜಿ ರವಾನಿಸಿದ್ದಾರೆ. ಟೆಲಿಗ್ರಾಫ್ ಯಂತ್ರದ ಮೂಲಕ ಕಟ್ಟ ಕಡಕಡ ಎಂದು ಟೈಪ್ ಮಾಡಿ ಸಂದೇಶ ರವಾನಿಸುವ ವಿಧಾನ ನಿಂತುಹೋಗಿ ಬಹಳ ವರ್ಷಗಳಾದರೂ, ಟೆಲಿಗ್ರಾಂ ಹೆಸರಿನಲ್ಲಿ ಕಿರು ಸಂದೇಶ ರವಾನಿಸಿರುವುದು ಮಾತ್ರ ಭಾನುವಾರದವರೆಗೂ ಉಳಿದುಕೊಂಡಿತ್ತು.
ಚಿತ್ತಾಪುರ; ಹಾವು ಕಚ್ಚಿ ವ್ಯಕ್ತಿ ಸಾವು
ಗುಲ್ಬರ್ಗ: ಹಾವು ಕಚ್ಚಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಮರ್ತೂರ ಗ್ರಾಮದಲ್ಲಿ ನಡೆದಿದೆ. ಪರಶುರಾಮ ತಂದೆ ಶರಣಪ್ಪ ಉದಯಕರ್(35) ಮೃತಪಟ್ಟ ದುರ್ದೈವಿ. ಹಾವು ಕಚ್ಚಿ ತೀವ್ರ ಅಸ್ವಸ್ಥನಾಗಿದ್ದ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.