ಖಾತ್ರಿ ಕೂಲಿ ಪಾವತಿಸಿ
ಯಾದಗಿರಿ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಹಣ ಪಾವತಿಸುವಂತೆ, ಉದ್ಯೋಗ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ ಯೋಜನೆ ನಿರ್ದೇಶಕ ಮುನೀಶ ಮೌದ್ಗಿಲ್ಗೆ ಮನವಿ ಸಲ್ಲಿಸಿದ್ದಾರೆ.
ಹಣ ಪಾವತಿಯಾಗಿಲ್ಲ: ಖಾತ್ರಿ ಯೋಜನೆಯಲ್ಲಿ ದುಡಿದ ಕೂಲಿಕಾರರಿಗೆ ಹಣ ಹಾಗೂ ನಿರುದ್ಯೋಗ ಭತ್ಯೆ ನೀಡುವಂತೆ ಅನೇಕ ಬಾರಿ ಜಿಪಂ, ತಾಪಂ ಹಾಗೂ ಗ್ರಾಪಂಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಅಲ್ಲದೇ ಕೂಲಿಕಾರರಿಗೆ ಕೆಲಸ ನೀಡುವಂತೆಯೂ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇದುವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಕೆಲಸ ಮಾಡಿದ ಬಡ ಕೂಲಿ ಕಾರ್ಮಿಕರಿಗೆ ಹಣ ಪಾವತಿಯಾಗಿಲ್ಲ. ಅಲ್ಲದೇ ಹೊಸದಾಗಿ ಕೆಲಸವನ್ನೂ ನೀಡುತ್ತಿಲ್ಲ. ಆದ್ದರಿಂದ ಈ ಬಗ್ಗೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿ, ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುವಂತೆ ಹಾಗೂ ಹಣ ಪಾವತಿಸುವಂತೆ ಸೂಚಿಸಬೇಕೆಂದರು.
ಅವ್ಯವಹಾರ ಪರಿಶೀಲಿಸಿ: ತಾಲೂಕಿನ ಅಜಲಾಪುರ ಗ್ರಾಪಂ ವ್ಯಾಪ್ತಿಯ ಅಜಲಾಪುರ, ಬದ್ದೇಪಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಖಾತ್ರಿ ಯೋಜನೆಯಡಿ ದುಡಿದ ಕೂಲಿಕಾರರಿಗೆ ಕೂಡಲೇ ಕೂಲಿ ಹಣ ಪಾವತಿಸಬೇಕು. ಶಹಾಪುರ ತಾಲೂಕಿನ ಗೋನಾಲ ಗ್ರಾಪಂ ವ್ಯಾಪ್ತಿಯಲ್ಲಿ ದುಡಿದ ಕೂಲಿಕಾರ್ಮಿಕರಿಗೂ ಹಣ ಪಾವತಿಸಬೇಕು. ಯಾದಗಿರಿ ತಾಲೂಕಿನ ಅಜಲಾಪುರ ಗ್ರಾಪಂನಲ್ಲಿ 2011-13ರ ನಡುವೆ ನಡೆದ ಖಾತ್ರಿ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದು, ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.