ಜನರ ವಾಸಸ್ಥಳದಿಂದ ಹಂದಿ ದೂರವಿಡಲು ಪಾಲಿಕೆ ಆದೇಶ
ಗುಲ್ಬರ್ಗ: ಇಲ್ಲಿನ ನಗರ ವ್ಯಾಪ್ತಿಯಲ್ಲಿ ಹಂದಿಗಳ ಕಾಟ ಹೆಚ್ಚಾಗಿದ್ದು, ಅವುಗಳಿಂದ ಸಾರ್ವಜನಿಕರಿಗೆ ಅದರಲ್ಲೂ ಚಿಕ್ಕಮಕ್ಕಳ ಆರೋಗ್ಯದಲ್ಲಿ ತೊಂದರೆಯಾಗುತ್ತಿದೆ ಹಾಗೂ ಪಾಲಿಕೆಯ ಕಸದ ತೊಟ್ಟೆಗಳಲ್ಲಿ ಸಂಗ್ರಹಿಸಿದ ಕಸವನ್ನು ಚೆಲ್ಲಾಪಿಲ್ಲಿ ಮಾಡಿ ಪರಿಸರ ನೈರ್ಮಲ್ಯ ಹದಗೆಡಿಸುತ್ತಿವೆ. ಅಲ್ಲದೆ ಹಂದಿಗಳಿಂದ ಮೆದುಳು ಜ್ವರ ಹರಡುವ ಸಾಧ್ಯತೆಯಿರುವುದನ್ನು ಮನಗಂಡು ಕೆಎಂಸಿ ಕಾಯ್ದೆ 1976ರ ಕಲಂ 345ರ ಪ್ರಕಾರ ನಾಗರಿಕರ ವಾಸಸ್ಥಳದಿಂದ ಹಂದಿಗಳನ್ನು ದೂರವಿಡುವಂತೆ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರ ಆದೇಶ ಹೊರಡಸಿ ಹಂದಿ ಮಾಲೀಕರಿಗೆ ಗಡುವು ನೀಡಿದ್ದಾರೆ.
ಹಂದಿಗಳ ಮಾಲೀಕರಿಗೆ ಇದು ಅಂತಿಮ ಆದೇಶವಾಗಿದ್ದು, ಜು. 25ರೊಳಗಾಗಿ ನಾಗರಿಕರ ವಾಸಸ್ಥಳದಿಂದ ಹಂದಿಗಳನ್ನು ದೂರ ಸಾಗಿಸಲು ಸೂಚಿಸಲಾಗಿದ್ದು, ವಾಸಸ್ಥಳಗಳಲ್ಲಿ ಹಂದಿಗಳು ಕಂಡು ಬಂದಲ್ಲಿ ಆ ಹಂದಿಗಳ ಮಾಲೀಕರಿಗೆ 5 ಸಾವಿರ ದಂಡ ಹಾಗೂ ಸದರಿ ಹಂದಿಗಳನ್ನು ಯಾವುದೇ ಪರಿಹಾರ ನೀಡದೆ ಪಾಲಿಕೆಯ ವತಿಯಿಂದ ನಗರದ ಹೊರಗಡೆ ಸಾಗಿಸಿ, ಸಾಗಾಣಿಕೆ ವೆಚ್ಚವನ್ನು ಹಂದಿ ಮಾಲೀಕರಿಂದ ವಸೂಲು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.