ರಸ್ತೆ, ಚರಂಡಿ ಸೌಕರ್ಯಕ್ಕೆ ಆಗ್ರಹಿಸಿ ಇಂದು ರಸ್ತೆತಡೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.16
ಇಲ್ಲಿನ ಭಾಂಡೆ ಬಜಾರ್, ಕಿರಾಣಾ ಬಜಾರ್ ಸೇರಿದಂತೆ ನಗರದ ಎಲ್ಲಾಕಡೆ ಹದಗೆಟ್ಟು ಹೋಗಿರುವ ರಸ್ತೆ- ಚರಂಡಿ ಮೂಲ ಸೌಕರ್ಯದ ಬಗ್ಗೆ ಗಮನ ಕೊಡುವಂತೆ ಜಿಲ್ಲಾಡಳಿತದ ಗಮನ ಸೆಳೆಯಲು ಎಚ್ಕೆಸಿಸಿಐ ಜುಲೈ 17ರಂದು ರಸ್ತೆತಡೆ ಹೋರಾಟಕ್ಕೆ ಮುಂದಾಗಿದೆ.
ಈಚೇಗೆ ಸಭೆ ಸೇರಿ ಈ ನಿರ್ಣಯಕ್ಕೆ ಬಂದಿರುವುದಾಗಿ ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಉಪಾಧ್ಯಕ್ಷ ಶಶಿಕಾಂತ ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಸ್ತೆ ಅಗಲೀಕರಣ ಮಾಡಿ ವರ್ಷ 3 ಕಳೆದರೂ ಅಲ್ಲಿನ ರಸ್ತೆಗಳ ಪ್ರಗತಿಯಾಗಿಲ್ಲ, ಚರಂಡಿಗಳು ಹಾಗೇ ಬಿದ್ದಿವೆ. ಹೀಗಿದ್ದರೂ ಅಧಿಕಾರಿಗಳು ಅತ್ತ ನೋಡಲು ಸಿದ್ಧರಿಲ್ಲ. ಇದನ್ನೆಲ್ಲ ಸಭೆಯಲ್ಲಿ ಕಟುವಾಗಿ ಖಂಡಿಸಲಾಗಿದೆ. ವಿವಿಧ ಸಂಘಟನೆಗಳವರು, ವರ್ತಕರೆಲ್ಲರೂ ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲಿಸಿದ್ದಾರೆಂದು ನಿಗ್ಗುಡಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 17ರಂದು ಸುಖಶಾಂತಿ ಚೌಕದಿಂದ ಹೋರಾಟ ಆರಂಭವಾಗುತ್ತದೆ. ಪ್ರತಿಭಟನೆ ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಹಾದು ಹೋಗುತ್ತದೆ. ಹುಮ್ನಾಬಾದ್ ಬೇಸ್ನಲ್ಲಿ ರಸ್ತೆತಡೆ ನಡೆಸಲಾಗುತ್ತದೆ ಎಂದು ನಿಗ್ಗುಡಗಿ ಹೇಳಿದ್ದಾರೆ. ಕಾಯದರ್ಶಿ ಬಸವರಾಜ ಹಡಗಿಲ್, ಖಜಾಂಚಿ ರಾಜಶೇಖರ ಕಡಗಂಚಿ, ಆಡಳಿತ ಮಂಡಲಿ ಸದಸ್ಯರು ಸೇರಿದಂತೆ ಅನೇಕರು ಈ ಹೋರಾಟದ ಬಗ್ಗೆ ನೀಡಲಾಗಿರುವ ಹೇಳಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.