ಕ್ಯಾರಿಓವರ್‌ಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.17
ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ಯಾರಿಓವರ್ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಹೈ.ಕ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡ ಮಾಧ್ಯಮದಿಂದ 10ನೇ ತರಗತಿ ಪಾಸಾದ ಪಾಲಿಟೆಕ್ನಿಕ್ ವಿವಿಧ ಬ್ರ್ಯಾಂಚುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ತಕ್ಷಣದಿಂದಲೇ ವಿಷಯ ಮನವರಿಕೆಯಾಗುವುದಿಲ್ಲ. ತಿಂಗಳುಗಳೇ ಬೇಕಾಗುತ್ತವೆ. ವಿದ್ಯಾರ್ಥಿಗಳ ಮನೋಬಲವನ್ನು ಅರ್ಥ ಮಾಡಿಕೊಂಡು ಸರ್ಕಾರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಪೂರಕವಾಗುವ ರೀತಿಯಲ್ಲಿ ಶೈಕ್ಷಣಿಕ ನೀತಿಯನ್ನು ರಚಿಸಿ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕ್ಯಾರಿಓವರ್ ಪದ್ಧತಿ ಜಾರಿಗೆ ತರುವುದರಿಂದ ಮುಂದಿನ ತರಗತಿಗೆ ಬಡ್ತಿ ಸಿಗುವುದು. ಇದರಿಂದ ಉತ್ತೇಜಕನಾಗಿ ವಿದ್ಯಾರ್ಥಿ ಹಿಂದಿನ ಅನುತ್ತೀರ್ಣವಾದ ವಿಷಯಗಳನ್ನು ಓದುವುದರ ಜತೆಗೆ ಎರಡನೇ ವರ್ಷದ ವಿಷಯಗಳಿಗೂ ನಿಷ್ಠೆಯಿಂದ ಅಭ್ಯಾಸ ಮಾಡುತ್ತಾನೆ. ಅಲ್ಲದೇ ಆದಷ್ಟು ಶೀಘ್ರ ಮೂರು ವರ್ಷದಲ್ಲೇ ಪಾಲಿಟೆಕ್ನಿಕ್ ಕೋರ್ಸು ಮುಗಿಸಿ ಉದ್ಯೋಗ ಪಡೆಯುವ ಬಗ್ಗೆ ಸಂಕಲ್ಪ ಮಾಡಲು ಸಾಧ್ಯವಾಗಲಿದ್ದು, ಕೂಡಲೇ ಕ್ಯಾರಿಓವರ್ ಜಾರಿಗೆ ತರಲು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಣ ದಸ್ತಿ, ನಿತೀಶ ವಿ. ಸಾಲಿಮಠ, ಸಿದ್ದು ಎಸ್. ಪಾಟೀಲ್ ಸೇರಿದಂತೆ ವಿವಿಧ ಕಾಲೇಜುಗಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
--
ಎಚ್ಚೆತ್ತುಕೊಂಡ ಪಾಲಿಕೆ
ಗುಲ್ಬರ್ಗ: ನಗರದ ಜಗತ್ ವೃತ್ತದಲ್ಲಿ ವಾಹನ ಸವಾರರು- ಪಾದಚಾರಿಗಳನ್ನು ಬಲಿ ಪಡೆಯಲು ಕಾದು ಕುಳಿತಿದ್ದ ಮುಖ್ಯರಸ್ತೆಯ ತಿರುವಿನ ಪಕ್ಕದಲ್ಲೇ ಸೃಷ್ಟಿಯಾಗಿದ್ದ ಬೃಹದಾಕಾರದ ತಗ್ಗನ್ನು ಕೊನೆಗೂ ಮಹಾನಗರ ಪಾಲಿಕೆ ಮುಚ್ಚಲು ಮುಂದಾಗಿದೆ. ಈ ಕುರಿತಂತೆ ಕಳೆದೆರಡು ದಿನಗಳ ಹಿಂದೆ 'ಕನ್ನಡಪ್ರಭ' ತನ್ನ ಸಂಚಿಕೆಯಲ್ಲಿ ಮೃತ್ಯುಕೂಪ ಎಂದು ಈ ತಗ್ಗನ್ನು ಬಣ್ಣಿಸಿ ಸಚಿತ್ರ ವರದಿ ಮಾಡಿತ್ತು.
ಬುಧವಾರ ಈ ತಗ್ಗನ್ನು ಸರಿಪಡಿಸುವ ಕೆಲಸ ಶುರುವಾಗಿದೆ. ಹತ್ತು ಕೆಲಸಗಾರರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಬಲ್ ವೈರ್‌ಗಳು, ಕರೆಂಟ್ ವೈರ್‌ಗಳ ರಾಶಿಯೇ ಇಲ್ಲಿರುವುದರಿಂದ ಈ ತಗ್ಗನ್ನು ಅದೇಗೆ ಮುಚ್ಚಿ ಸುರಕ್ಷಿತ ವಲಯವಾಗಿಸಬೇಕು ಎಂಬುದನ್ನು ಚಿಂತಿಸಿರುವ ಪಾಲಿಕೆ ಈ ಕಾಮಗಾರಿಯನ್ನಂತೂ ಶುರು ಮಾಡಿದೆ.