ಗ್ರಾಪಂ ಉಪಚುನಾವಣೆ
ಯಾದಗಿರಿ: ಜಿಲ್ಲೆಯ ಮೂರು ತಾಲೂಕುಗಳ ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಆ. 4ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ.
ಯಾದಗಿರಿ ತಾಲೂಕಿನ ಕಾಕಲವಾರ, ಚಂಡರಕಿ, ಮತ್ತು ಶಹಾಪೂರ ತಾಲೂಕಿನ ಶಿರವಾಳ, ಹೈಯಾಳ (ಬಿ), ಮದ್ರಕಿ ಹಾಗೂ ಸುರಪೂರ ತಾಲೂಕಿನ ದೇವತಕಲ್, ಕೋಳಿಹಾಳ, ಕೆಂಭಾವಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾತ್ರ ಜು.17ರಿಂದ ಆ.7ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದು ಬರ ಕಾಮಗಾರಿ, ಪ್ರಭಾವ, ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ.
ಈ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಜು.24ಕೊನೆಯ ದಿನವಾಗಿದೆ. ಜು.25ರಂದು ನಾಮಪತ್ರ ಪರಿಶೀಲಿಸಲಾಗುತ್ತದೆ. ಜು.27ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. ಆ.4ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಆ.7 ರಂದು ಮತಎಣಿಕೆಯು ಆಯಾ ತಾಲೂಕಾ ಕೇಂದ್ರ ಸ್ಥಳಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.