ಪಪಂ ಪಟ್ಟಿ ಸೇರ್ಪಡೆಗೆ ಚೌಡಯ್ಯ ಪೀಠ ಆಗ್ರಹ
ಗುಲ್ಬರ್ಗ: ಕೋಲಿ, ಡೋರ, ಟೋಕರೆ ಕೋಲಿ ಜನಾಂಗದ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಪೀಠ ಆಗ್ರಹಿಸಿದೆ.
ಪೀಠದ ಅಧ್ಯಕ್ಷ ಶಾಂತಮುನಿ ಸ್ವಾಮೀಜಿ ಮತ್ತು ಕಾರ್ಯಾದ್ಯಕ್ಷ ವಿಠ್ಠಲ್ ಹೇರೂರ ಅವರ ನೇತೃತ್ವದಲ್ಲಿ ಸಮಾಜದ ಮುಖಂಡರು ನಗರದ ರಾಮೇಶ್ವರ ಸಭಾಗೃಹದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಆಚರಿಸಲು ಹಣ ಬಿಡುಗಡೆಗೊಳಿಸಬೇಕು. ಜಯಂತ್ಯುತ್ಸವಕ್ಕೆ ಜನವರಿ 21ರಂದು ರಜೆ ಘೋಷಣೆ ಮಾಡಬೇಕು. ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಅಭಿವೃದ್ಧಿಗೆ 25 ಕೋಟಿ ಮತ್ತು ಚೌಡಯ್ಯನವರ ಪ್ರಾಧಿಕಾರ ರಚಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಜು.23ರಂದು ಪೀಠದ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಎಲ್ಲ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ಮತ್ತು ಮೆರವಣಿಗೆ ನಡೆಸಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು. ಅಧಿವೇಶನದಲ್ಲಿ ಪೀಠದ ಕಾರ್ಯಕಾರಿ ಮಂಡಳಿ ರಚಿಸಲಾಗುವುದು. ಪ್ರತಿ ತಾಲೂಕು, ಪ್ರತಿ ಜಿಲ್ಲೆ ಹಾಗೂ ಕಂದಾಯ ವಿಭಾಗ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಿ ಪೀಠದ ಚಟುವಟಿಕೆಗಳು ಚುರುಕುಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಶೇಖರ ತಲಾರಿ, ಈರಣ್ಣ, ಮಲ್ಲಿಕಾರ್ಜುನ ಸುರಪುರ, ಸಿದ್ದು ಎಚ್. ಜಮಾದಾರ, ದಶರಥ ಕುಮಸಗಿ, ಭೀಮಾಶಂಕರ ದುಕನದಾರ, ಪರಮೇಶ್ವರ ದೇಸಾಯಿ ಇದ್ದರು.