ಅಣೆಕಟ್ಟೆ ಭರ್ತಿಗೆ ಅರ್ಧ ಮೀಟರ್ ಬಾಕಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.18
ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಗೆ ಅರ್ಧ ಮೀಟರ್ ಬಾಕಿಯಿದೆ. 492.25 ಮೀಟರ್ ಎತ್ತರದ ಅಣೆಕಟ್ಟೆಯಲ್ಲಿ ಗುರುವಾರ 491.76 ಮೀಟರ್ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 4,955 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಡ್ಯಾಂನಿಂದ 3,735 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಲ್ಲಿ ಕೃಷ್ಣಾ ನದಿಗೆ 2,135, ಎಡದಂಡೆ ಕಾಲುವೆಗೆ 1,500 ಹಾಗೂ ಬಲದಂಡೆ ಕಾಲುವೆಗೆ 100 ಕ್ಯುಸೆಕ್ ನೀರು ಹರಿಬಿಡಲಾಗಿದೆ. ಅಲ್ಲದೆ ನದಿಗೆ ಅಣೆಕಟ್ಟೆಯ ಎರಡು ಗೇಟ್‌ಗಳನ್ನು 2 ಅಡಿಯಷ್ಟು ಎತ್ತುವ ಮೂಲಕ ಸುಮಾರು 10 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 33.3 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 31.054 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿ ಪಾತ್ರದಲ್ಲಿ ಸದ್ಯ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಆಲಮಟ್ಟಿಯಿಂದ ಹೊರ ಹರಿವು ಕಡಿಮೆಯಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಪ್ರಾರಂಭವಾದಲ್ಲಿ ಗೇಟು ತೆರೆದು ನದಿಗೆ ನೀರು ಹರಿದು ಬಿಡಲಾಗುವುದು ಎಂದು ಜಲಾಶಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.