ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿವಾಸಿಗಳ ಬದುಕು 'ನಾಯಿ'ಪಾಡು!

Lingaraj Badiger
Updated On : 19 Jul 2013, 11:41 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.18
ಮಳೆ 24್ಢ7 ಸುರಿಯುತ್ತಿರುವ ಬಚ್ಚಲು ಮನೆಯಂತಾಗಿರುವ ಗುಲ್ಬರ್ಗ ಮಹಾನಗರ ನಿವಾಸಿಗಳ ಬದುಕು ಅಕ್ಷರಶಃ ನಾಯಿಪಾಡು...
ಕುಳಿ ತುಂಬಿರುವ ರಸ್ತೆಗಳು, ಮಳೆ ನೀರಿನಿಂದ ಜಲಾವೃತಗೊಂಡು ತೊಂದರೆ ಕೊಡುತ್ತಿರುವ ಬೆನ್ನಲ್ಲೇ ಇದೀಗ ಶ್ವಾನಗಳು ತಂಡೋಪತಂಡವಾಗಿ ದಾಳಿ ಮಾಡುತ್ತ ದಾರಿಹೋಕರು, ಕಾರ್, ಬೈಕ್ ಸವಾರರನ್ನು ಗೋಳಾಡಿಸುತ್ತಿವೆ, ಪ್ರಾಣಭೀತಿ ಉಂಟು ಮಾಡುತ್ತ ಎಲ್ಲರನ್ನು ಹೆದರಿಸಲಾರಂಭಿಸಿವೆ.
ಕಳೆದೊಂದು ವಾರದಿಂದ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಇರುವ ಏಕೈಕ ಮುಖ್ಯರಸ್ತೆ(ಜಗತ್ ವೃತ್ತ- ಸರ್ದಾರ್ ಪಟೇಲ್ ವೃತ್ತ)ಯಲ್ಲೇ ನಾಯಿಗಳ ಆಟಾಟೋಪ ಎಗ್ಗಿಲ್ಲದೆ ಸಾಗಿದೆ.
ಸುತ್ತುವರಿದ 10ಕ್ಕೂ ಹೆಚ್ಚು ನಾಯಿ: ನಾಯಿಗಳು ಹತ್ತಿಪ್ಪತ್ತು ಗುಂಪು ಮಾಡಿಕೊಂಡು ತಂಡೋಪಾದಿಯಲ್ಲಿ ಸಂಚರಿಸುತ್ತ ತಮ್ಮೊಳಗೆ ಜಗಳ ಕಾಯುತ್ತಿವೆ. ಈ ಸಂದರ್ಭದಲ್ಲಿ ದಾರಿಯಲ್ಲಿ ಬಂದವರ ಮೇಲೆ ದಾಳಿ ಮಾಡುತ್ತ ಸಾಗಿವೆ. ಗುರುವಾರವಂತೂ ವಿಕಾಸ ಭವನದ ಮುಖ್ಯ ರಸ್ತೆಯಲ್ಲಿರುವ ಶೌಚಾಲಯಕ್ಕೆ ಹೋಗುವ ಉದ್ದೇಶದಿಂದ ಕಾರ್ ಸವಾರರೊಬ್ಬರು  ತಾವಿರುವ ವಾಹನ ನಿಲ್ಲಿಸಿ ಇನ್ನೇನು ಹೊರಗಡೆ ಇಳಿಯಬೇಕು ಎನ್ನುವಷ್ಟರಲ್ಲೇ ನಾಯಿಗಳ ಬಳಗ ದಾಳಿ ಮಾಡಿದಾಗ ಹೌಹಾರಿ ಕಾರಿನಿಂದ ಕೆಳಗೆ ಇಳಿಯದ ಪ್ರಸಂಗ ಘಟಿಸಿದೆ.
ಬಹುಹೊತ್ತು 10ಕ್ಕೂ ಹೆಚ್ಚು ನಾಯಿಗಳು ಕಾರನ್ನು ಸುತ್ತುವರಿದು ಬೊಗಳುವುದನ್ನು ಸುರು ಮಾಡಿದಾಗ ಕಾರೊಳಗಿರುವ ಸವಾರರು ಆತಂಕದಲ್ಲಿ ಮುಳುಗಿದರು. ಅಲ್ಲದೇ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಕಾರಿನ ಕಿಟಕಿ ಗಾಜುಗಳನ್ನೆಲ್ಲ ಭದ್ರಪಡಿಸಿ ಗಂಟೆಗಟ್ಟಲೇ ಅಲ್ಲೇ ನಿಂತುಬಿಟ್ಟರು ಎಂದು ಪ್ರತ್ಯಕ್ಷದರ್ಶಿಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ
ಯುವತಿ ಮೇಲೆ ದಾಳಿಗೆ ಯತ್ನ: ಇದೇ ಮಾರ್ಗದ ನೃಪತುಂಗ ನಗರ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಕಟ್ಟೆಯಲ್ಲಿ ನಿಂತು ಸಾರಿಗೆ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಗೂ ನಾಯಿಗಳು ಹೆದರಿಸಿರುವ ಘಟನೆ ನಡೆದಿದೆ. ನಾಯಿಗಳು ಗುಂಪಾಗಿ ಬಂದು ಮುಂದೆಯೇ ನಿಂತಾಗ ಹೆದರಿದ ಯುವತಿ 'ಏಕದಂ' ಸಾರಿಗೆ ಬಸ್ ನಿಲ್ದಾಣ ಹೊಕ್ಕಿದ್ದಾಳೆ. ಅಲ್ಲಿ ನಾಯಿಗಳು ಎಲ್ಲಿಂದ ಬೇಕಾದರೂ ಬರಬಹುದಾದರೂ ಅಲ್ಲಿನ ಈ ಬೆಳವಣಿಗೆ ಕಂಡು ದಾರಿಹೋಕರು ನಾಯಿಗಳನ್ನು ಹೊಡೆದೋಡಿಸಿದ್ದರಿಂದ ಆಗಬಹುದಾಗಿದ್ದ ನಾಯಿ ದಾಳಿಯಿಂದ ಯುವತಿ ಕೂದಲೆಳೆಯಲ್ಲಿ ಬಚಾವ್ ಆಗಿದ್ದಾಳೆ.
ಕಳೆದ ವರ್ಷ ಒಂದು ನಾಯಿ 13ಕ್ಕೂ ಹೆಚ್ಚು ಮಕ್ಕಳನ್ನು ಕಚ್ಚಿ ಬಡಾವಣೆಯ ಜನರೇ ತಲ್ಲಣಗೊಳ್ಳುವಂತಾಗಿತ್ತು. ಶ್ವಾನಗಳ ಈ ಕರಾಳ ದಾಳಿಯನ್ನು ನಗರವಾಸಿಗಳು ಇನ್ನೂ ಮರೆತಿಲ್ಲ. ಈಗ ಮತ್ತೆ ಶ್ವಾನ ದಾಳಿ ಅಲ್ಲಲ್ಲಿ ಶುರುವಿಟ್ಟುಕೊಂಡಿರುವುದು ಅನೇಕರನ್ನು ಬೆಚ್ಚಿ ಬೀಳಿಸಿದೆ.
ಪಾಲಕರೇ ಹುಷಾರ್!: ವರ್ತುಲ ರಸ್ತೆಯ ಸುತ್ತಲಿರುವ ಸಾಯಿನಗರ, ರವೀಂದ್ರನಾಥ ಟ್ಯಾಗೋರ ನಗರ, ಓಝಾ ಬಡಾವಣೆ, ಧನ್ವಂತರಿ ಆಸ್ಪತ್ರೆ ಸುತ್ತಲಿನ ಬಡಾವಣೆಗಳು, ದೇವಿನಗರ, ಲಕ್ಷ್ಮೀನಾರಾಯಣ ನಗರ, ಹಳೇ ಗುಲ್ಬರ್ಗದ ಬ್ರಹ್ಮಪುರ, ಗಂಗಾನಗರ, ಸಮತಾ ಕಾಲೋನಿ, ಬಸವನಗರ, ವಿದ್ಯಾನಗರ, ಶಾಂತಿನಗರ, ಬಸ್ ನಿಲ್ದಾಣ, ಬಿದ್ದಾಪುರ ಹೀಗೆ ಹಲವು ಬಡಾವಣೆಗಳಲ್ಲಿ ಕಳೆದ 2 ವಾರಗಳಿಂದ ನಾಯಿಗಳ ಕಾಟ ಕಾಣಿಸಿಕೊಂಡಿದ್ದು ನಿವಾಸಿಗಳು ಬೆಚ್ಚಿದ್ದಾರೆ.
ಪಾಲಕರಂತೂ ಮಕ್ಕಳನ್ನು ಶಾಲೆಗೆ, ಮನೆಯ ಹೊರಗೆ ಕಳುಹಿಸುವಾಗ ಹುಷಾರ್... ಎಂದು ತಾಕೀತು ಮಾಡಿಯೇ ಕಳುಹಿಸುವಂತಾಗಿದೆ. ಅನೇಕ ಮಕ್ಕಳು ಕೈಯಲ್ಲಿ ಕೋಲನ್ನು ಹಿಡಿದೇ ಹೊರಗೆ ಬರುವಂತಹ ವಾತಾವರಣ ಮೂಡಿದೆ ಎಂದರೂ ಅತಿಶಯೋಕ್ತಿಯೇನಲ್ಲ.
ಪಾಲಿಕೆಯವರು ಈ ವಿಚಾರದಲ್ಲಿ ಯಾವುದೇ ಕ್ರಮಗಳಿಗೆ ಮುಂದಾಗದೆ ಮೌನವಾಗಿದ್ದಾರೆ. ನಾಯಿಕಾಟ ಹೆಚ್ಚಾದ ಮೇಲೆ ಅದು ನಿಯಂತ್ರಣಕ್ಕೆ ಬಾರದು ಎಂಬ ಹಂತ ತಲುಪಿದ ಮೇಲೆ ನಿಂಯತ್ರಣಕ್ಕೆ ಹೆಣಗಾಡುವ ಬದಲು ಆರಂಭದಲ್ಲಿ ಉಪಟಳಕ್ಕೆ ಮೂಗುದಾರ ಹಾಕಿದರೆ ಉತ್ತಮವಲ್ಲವೆ ಎಂಬುದು ಜನರ ಪ್ರಶ್ನೆ.
ಪಾಲಿಕೆ ಜಾಣ ಕುರುಡು ಧೋರಣೆ: ಮಹಾನಗರ ಪಾಲಿಕೆ, ಕುಳಿ ತುಂಬಿರುವ ರಸ್ತೆಗಳಿಗೆ ಕಾಯಕಲ್ಪ ಕೊಡುವ ಗೋಜಿಗೆ ಹೋಗಿಲ್ಲ. ಇನ್ನು ಇದೀಗ ಶುರುವಾಗಿರುವ ನಾಯಿ ದಾಳಿಗೆ ಕ್ಯಾರೆ ಸಹ ಅನ್ನೋದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪಾಲಿಕೆಯ ನಿಧಾನ ಧೋರಣೆಯೇ ಇಂತಹ ಮಾತುಗಳಿಗೆ ಕಾರಣವಾಗಿರುವುದು ವಾಸ್ತವ.
ಪಾಲಿಕೆ ಆಯುಕ್ತರ ಶ್ರೀಮಂತ ಕಟ್ಟೀಮನಿ, ಅಲ್ಲಿನ ಆರೋಗ್ಯಾಧಿಕಾರಿಗಳು, ಪರಿಸರ ಎಂಜಿನಿಯರ್ ಮೊದಲ್ಗೊಂಡು ನಗರಾದ್ಯಂತ ಇರುವ ಪಾಲಿಕೆಯ ನೈರ್ಮಲ್ಯ ನಿರೀಕ್ಷಕರ ಜಾಲಗಳು ನಿವಾಸಿಗಳ ನಾಯಿಪಾಡು ನೋಡಿಯೂ ನೋಡದವರಂತೆ ತಮ್ಮ ಪಾಡಿಗೆ ತಾವಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement