ಪಿಎಸ್‌ಐ ಸೇರಿ ಮೂವರ ಅಮಾನತು
ಯಾದಗಿರಿ: ಪ್ರಕರಣವೊಂದರ ತನಿಖೆಯಲ್ಲಿ ಕರ್ತವ್ಯ ಲೋಪ ಎಸಗಿದ ವಡಗೇರಾ ಠಾಣೆ ಪಿಎಸ್‌ಐ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ವಂಶಿಕೃಷ್ಣ ಗುರುವಾರ ಆದೇಶಿಸಿದ್ದಾರೆ.
ತನಿಖೆ ವೇಳೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ವಡಗೇರಾ ಠಾಣೆ ಪಿಎಸ್‌ಐ ಎಸ್.ಎಂ. ಯಾಳಗಿ, ಎಎಸ್‌ಐ ಮಂಜುಳಾ ಮತ್ತು ಪೇದೆ ಚಂದ್ರಶೇಖರ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಶಹಾಪುರ ತಾಲೂಕಿನ ಮಳ್ಳಳ್ಳಿ ಗ್ರಾಮದ ಯುವತಿ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತಂತೆ ಸೂಕ್ತವಾಗಿ ತನಿಖೆ ನಡೆಸಿಲ್ಲ ಎನ್ನಲಾಗಿದೆ. ಇದರಿಂದಾಗಿ ಅನ್ಯಾಯಕ್ಕೊಳಗಾದ ಯುವತಿಯ ಪೋಷಕರು ನ್ಯಾಯಕ್ಕಾಗಿ ಎಸ್ಪಿಗೆ ಮನವಿ ಸಲ್ಲಿಸಿದ್ದರು.
ಎಫ್‌ಐಆರ್ ಕೂಡ ಸೂಕ್ತವಾಗಿ ದಾಖಲಿಸಿಕೊಂಡಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿ 13 ವರ್ಷವೆಂದು ತಿಳಿಸಿದ್ದರೂ ಪಿಎಸ್‌ಐ ಅವರು 18 ವರ್ಷ ಎಂದು ನಮೂದಿಸಿಕೊಂಡಿದ್ದಾರೆ. ಅಲ್ಲದೇ ಉದ್ದೇಶಪೂರ್ವಕವಾಗಿ ಎಫ್‌ಐಆರ್‌ನಲ್ಲಿ ನಾವು ತಿಳಿಸಿದ ವಿಷಯಗಳನ್ನು ಕೈಬಿಡಲಾಗಿದೆ. ಇದರಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ಪೋಷಕರು ಇತ್ತೀಚೆಗೆ ಎಸ್ಪಿಗೆ ಪೋಷಕರು ಮನವಿ ಸಲ್ಲಿಸುವ ಮೂಲಕ ದೂರು ನೀಡಿದ್ದರು. ದೂರಿನನ್ವಯ ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಎಸ್ಪಿ ವಂಶಿಕೃಷ್ಣ ಮೂವರನ್ನು ಅಮಾನತು ಮಾಡಿದ್ದಾರೆ.