ಮುಲ್ಲಾಮಾರಿ ನೀರಿನ ಮಟ್ಟ
ಚಿಂಚೋಳಿ: ತಾಲೂಕಿನಲ್ಲಿ ಕಳೆದೆರಡು ತಿಂಗಳಿನಿಂದ ಮಳೆಯಾಗುತ್ತಿದ್ದರು ಇಲ್ಲಿನ ಚಂದ್ರಂಪಳ್ಳಿ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ ಎಂದು ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಾಹೀದ್ ಅಲಿ ಮತ್ತು ಸುರೇಶ ಮೇದಾ ತಿಳಿಸಿದ್ದಾರೆ. ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನೀರಿನ ಗರಿಷ್ಟಮಟ್ಟ 491 ಮೀಟರ್ ಇದ್ದು, ನೀರಿನ ಕನಿಷ್ಟ ಮಟ್ಟ 489.09 ಮೀಟರ್ ಇದೆ. ಒಳ ಹರಿವು ಕೇವಲ 18 ಕ್ಯುಸೆಕ್ ಇದೆ. ಚಂದ್ರಂಪಳ್ಳಿ ನೀರಾವರಿ ಯೋಜನೆಯ ನೀರಿನ ಗರಿಷ್ಟ ಮಟ್ಟ- 493.16 ಮೀಟರ್ ಇದ್ದು ಸದ್ಯ ನೀರಿನ ಕನಿಷ್ಟ ಮಟ್ಟ 488.82 ಎಂದು ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ವಿತರಣೆ
ಗುಲ್ಬರ್ಗ: ಜೈ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ್ ಪಾಟೀಲ್‌ರ 44ನೇ ಹುಟ್ಟುಹಬ್ಬದ ಪ್ರಯುಕ್ತ ಜು.19 ರಂದು ಬೆಳಗ್ಗೆ 3.30ಕ್ಕೆ ನಗರದ ಹೊರ ವಲಯದಲ್ಲಿರುವ ನಂದಗೋಕುಲ ಅನಾಥಾಶ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಚಾದರ ಮತ್ತು ಜಮಖಾನೆ ವಿತರಣೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಗುಲ್ಬರ್ಗ ತಹಸೀಲ್ದಾರ್ ವಿನೋದರೆಡ್ಡಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ ಮತ್ತು ಜಲ್ಲಾ ಕಾರ್ಯಾಧ್ಯಕ್ಷ ಸಚಿನ್ ಫರಹತಾಬಾದ್ ಕೋರಿದ್ದಾರೆ.
ನಾಳೆ ಪ್ರತಿಭಟನೆ
ಗುಲ್ಬರ್ಗ: ಸರ್ಕಾರಿ ಜಮೀನುಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಜು.20ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಂದು ಮಧ್ಯಾಹ್ನ 12ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಂಥರ್ ಸಮಿತಿ ಪದಾಧಿಕಾರಿಗಳು, ಮುಖಂಡರು ಭಾಗವಹಿಸಬೇಕೆಂದು ರಾಜ್ಯಾಧ್ಯಕ್ಷ ಮಲ್ಲಪ್ಪ ಎಂ. ಹೊಸ್ಮನಿಕರ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಿಲಿಂದ ಸನಗುಂದಿ, ಭೀಮರಾಯ ನಗನೂರ, ಶಿವಕುಮಾರ್ ತೊಟ್ನಳ್ಳಿ, ಕಲ್ಯಾಣರಾವ ಡೊಣ್ಣೂರ್, ಸುರೇಶ ನೂಲಾ ಇದ್ದರು.
ತಪಾಸಣಾ ಶಿಬಿರ
ಗುಲ್ಬರ್ಗ: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಹಾಗೂ ಆರಜು ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ಗಳ ಸಹಯೋಗದೊಂದಿಗೆ ಜುಲೈ 19ರಂದು ಬೆಳಗಿನ 9. 30 ರಿಂದ 12.30 ಗಂಟೆಯವರೆಗೆ ಸೆಂಟ್ ಜಾನ್ಸ್ ಹೆಲ್ತ್ ಸೆಂಟರ್ (ಡಾ.ಮಲ್ಲಾರಾವ ಮಲ್ಲೆ ದವಾಖಾನೆ) ಜಗತ್, ಗುಲ್ಬರ್ಗದಲ್ಲಿ ನೇತ್ರ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ.