ಜೋಳದಡಗಿ ಬ್ಯಾರೇಜಿನಲ್ಲಿ ಹೂಳು
ಕನ್ನಡಪ್ರಭ ವಾರ್ತೆ ಯಾದಗಿರಿ ಜು.19
ಕೃಷ್ಣಾ- ಭೀಮಾ ನದಿ ಸಂಗಮದ ಮೇಲ್ಭಾಗದ ಜೋಳದಡಗಿಯಲ್ಲಿ ಸುಮಾರು ರು. 25 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವುದ 550 ಮೀ. ಉದ್ದದ ಬ್ಯಾರೇಜು ರೈತರಿಗೆ ಉಪಯೋಗವಾಗದ ಸ್ಥಿತಿಯಲ್ಲಿದೆ. 2003ರಲ್ಲಿ ನಿರ್ಮಿಸಲಾಗಿರುವ ಈ ಬ್ಯಾರೇಜ್ನಲ್ಲಿ ಸುಮಾರು 1.29 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೆ ಇದರ ಒಂದು ಬದಿಯಲ್ಲಿ 1 ಕಿಮೀ ಉದ್ದಕ್ಕೂ ಹೂಳು ಸಂಗ್ರಹವಾಗಿರುವುದರಿಂದ ತಾಲೂಕಿನ 3 ಗ್ರಾಮದ ಸುಮಾರು 5 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತವಾಗಿದೆ.
ಕೆಲ ಸ್ಥಿತಿವಂತ ರೈತರು ಲಕ್ಷಾಂತರ ರು. ಖರ್ಚು ಮಾಡಿ ಸುಮಾರು ಅರ್ಧ ಕಿಮೀದಿಂದ ಒಂದು ಕಿಮೀವರೆಗೆ ಪೈಪ್ಲೈನ್ ಅಳವಡಿಸಿ ತಮ್ಮ ಹೊಲಗಳಿಗೆ ನೀರು ಹರಿಸಿಕೊಳ್ಳುತ್ತಾರೆ. ಒಂದೆರಡು ಎಕರೆ ಭೂಮಿ ಹೊಂದಿದ ಸಣ್ಣ ಹಾಗೂ ಅತಿಸಣ್ಣ ರೈತರು ದೂರದ ಬ್ಯಾರೇಜ್ನಲ್ಲಿ ಸಂಗ್ರಹವಾಗಿರುವ ನೀರನ್ನು ನೋಡಿ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಜೋಳದಡಗಿ ರೈತರ ಆರೋಪವಾಗಿದೆ.
ನಿರ್ಲಕ್ಷ್ಯ: ಈ ಬ್ಯಾರೇಜು ಕೆಬಿಜೆಎನ್ನೆಲ್ ವ್ಯಾಪ್ತಿಯಲ್ಲಿ ದ್ದು ಹಣಕಾಸಿನ ಕೊರತೆಯಿಂದ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತವು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಮೌನ ತಾಳಿದೆ.
ಆದರೆ ನೀರಾವರಿ ಜಮೀನು ಎಂದು ನೀರಾವರಿ ಶುಲ್ಕವನ್ನು ಕಂದಾಯ ಇಲಾಖೆ ವಸೂಲಿ ಮಾಡುತ್ತದೆ. ಬಿತ್ತಿದ ಬೆಳೆಗೆ ನೀರು ಕೊಡಲು ಸಾಲಸೂಲ ಮಾಡಿ ನದಿಪಾತ್ರದಲ್ಲಿ ವಿದ್ಯುತ್ ಮೋಟಾರುಗಳನ್ನು ಅಳವಡಿಸಲಾಗುತ್ತಿದೆ. ಆದರೆ ಪ್ರವಾಹ ಬಂದಾಗಿ ಕೆಲವು ಮೋಟಾರುಗಳು ನೀರಲ್ಲಿ ಕೊಚ್ಚಿಹೋಗಿ ಅಪಾರ ನಷ್ಟವನ್ನು ಅನುಭವಿಸುವಂತಾಗಿದೆ. ಬ್ಯಾರೇಜ್ನ ಒಂದು ಕಡೆ ಹೂಳು ವ್ಯಾಪಕವಾಗಿ ತುಂಬಿರುವುದರಿಂದ ಆ ಭಾಗದ ರೈತರಿಗೆ ನೀರು ದೂರವಾಗಿದೆ.
ಕೃಷ್ಣಾ ಅಚ್ಚುಕಟ್ಟಿನ ವ್ಯಾಪ್ತಿಯ ಭೀಮಾ ನದಿಯ ನೀರನ್ನು ಬಳಕೆ ಮಾಡಿಕೊಳ್ಳಲು ದಶಕದ ಹಿಂದೆ ಹಲವಾರು ಬ್ಯಾರೇಜುಗಳನ್ನು ನಿರ್ಮಿಸಲಾಗಿದ್ದರೂ, ನಿಗದಿತ ಪ್ರಮಾಣದ ನೀರು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಬಚಾವತ್ ಆಯೋಗದ ಪ್ರಕಾರ ರಾಜ್ಯ ಸರ್ಕಾರವು ತನ್ನ ಪಾಲಿನ 15 ಟಿಎಂಸಿ ನೀರನ್ನು ಬಳಸಿಕೊಳ್ಳಲು ಭೀಮಾ ನದಿಗೆ ಅಡ್ಡಲಾಗಿ ಗುಲ್ಬರ್ಗ ಜಿಲ್ಲೆಯಲ್ಲಿ 4, ಯಾದಗಿರಿ ಜಿಲ್ಲೆಯಲ್ಲಿ 5 ಬ್ಯಾರೇಜ್ ನಿರ್ಮಿಸಲಾಗಿದೆ.
ಬಹುತೇಕ ಎಲ್ಲಾ ಬ್ಯಾರೇಜುಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ನಿರ್ವಹಣೆ ಕೊರತೆಯಿಂದ ಬಚಾವತ್ ಅಯೋಗ ನಿಗದಿಪಡಿಸಿದ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸನ್ನತಿ ಮತ್ತು ಘತ್ತರಗಿ ಬ್ಯಾರೇಜುಗಳಲ್ಲಿ ಏತ ನೀರಾವರಿ ವ್ಯವಸ್ಥೆ ಇದ್ದರೆ, ಉಳಿದ ಬ್ಯಾರೇಜುಗಳಲ್ಲಿ ರೈತರೇ ವಿದ್ಯುತ್ ಮೋಟಾರ್ ಬಳಸಿ ನೀರು ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜೋಳದಡಗಿ ಬ್ಯಾರೇಜ್ ಪ್ರದೇಶದ ರೈತರು ಪಂಪ್ಸೆಟ್ ಅಳವಡಿಸಿಕೊಂಡೇ ನೀರು ಪಡೆಯಬೇಕು. ಆದರೆ ಹುಳು ತುಂಬಿರುವುದರಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರುಣಿಸಲು ಸಾಧ್ಯವಾಗದೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.
ಹೂಳೆತ್ತಲು ಆಗ್ರಹ: ಹೂಳೆತ್ತಲು ಸಂಬಂಧಿತ ಇಲಾಖೆ ಸೂಕ್ತ ಕ್ರಮ ಜರಗಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಬ್ಯಾರೇಜಿನಲ್ಲಿ ನಿಗದಿತ ಪ್ರಮಾಣದ ನೀರು ಸಂಗ್ರಹವಾಗದೆ ಆಂಧ್ರಕ್ಕೆ ನೀರು ಹರಿದು ಹೋಗುತ್ತದೆ ಎಂಬುದು ರೈತರ ಆತಂಕ. ಈಗಲಾದರೂ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲೆಯ ನೀರಾವರಿ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ರೈತರಿಗೆ ವರದಾನವಾಗಬೇಕಾದ ಈ ಬ್ಯಾರೇಜುಗಳು ಶಾಪವಾಗಿ ಪರಿಣಮಿಸಿದರೆ ಅಚ್ಚರಿ ಪಡಬೇಕಿಲ್ಲ. ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಕೆಲ ದಿನಗಳ ಹಿಂದೆ ಜೋಳದಡಗಿ ಬ್ಯಾರೇಜ್ಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದ್ದರು. ನಂತರ ಅಧಿಕಾರಿಗಳೊಂದಿಗೆ ಮಾತನಾಡಿದಾಗ, ಬ್ಯಾರೇಜ್ಹೂಳು ತೆಗೆವುದು ಅಷ್ಟು ಸುಲಭವೂ ಅಲ್ಲ ಎಂಬ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗೆ ಸರ್ಕಾರವೇ ಆಸಕ್ತಿ ತೋರಬೇಕಿದೆ.
ನಾರಾಯಣಪುರ ಜಲಾಶಯ: 45 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಯಾದಗಿರಿ: ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಶುಕ್ರವಾರ 45 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ 7 ಗೇಟ್ಗಳನ್ನು ಎತ್ತಲಾಗಿದ್ದು, ಕೃಷ್ಣಾ ನದಿಗೆ ನೀರು ಹರಿಬಿಡಲಾಗಿದೆ. ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಆಲಮಟ್ಟಿ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ರಾತ್ರಿ ವೇಳೆ ಇನ್ನೂ ಹೆಚ್ಚು ನೀರು ಬರುವ ಸಾಧ್ಯತೆ ಇದೆ ಎಂದು ಜಲಾಶಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ಎತ್ತರ 492.25 ಮೀಟರ್ ಇದ್ದು, ಶುಕ್ರವಾರ 491.85 ಮೀಟರ್ ನೀರು ಭರ್ತಿಯಾಗಿದೆ.