ನಗರದ ಅಭಿವೃದ್ಧಿಗೆ ಶಾಸಕ ಡಾ. ಮಾಲಕರೆಡ್ಡಿ ಆಗ್ರಹ
ಯಾದಗಿರಿ: ಯಾದಗಿರಿ ನಗರದ ಹೊಸ ಬಡಾವಣೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.
ಶುಕ್ರವಾರ ಬೆಳಗ್ಗೆ ಪ್ರಶ್ನೋತ್ತರ ಕಲಾಪದಲ್ಲಿ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಗೆ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿ, ಹೊಸ ಬಡಾವಣೆಗಳಲ್ಲಿ ಸರಿಯಾದ ರಸ್ತೆಗಳಿಲ್ಲ. ಸಮರ್ಪಕ ಚರಂಡಿ ಇಲ್ಲ. ನೀರು ಪೂರೈಕೆ ವ್ಯವಸ್ಥೆಯಿಲ್ಲ. ಇಡೀ ನಗರದಲ್ಲೇ ಚರಂಡಿ ವ್ಯವಸ್ಥೆ ಸರಿಯಿಲ್ಲ. ಹೀಗಾದರೆ ಜನ ಹೇಗೆ ವಾಸ ಮಾಡುವುದು ಎಂದು ಪ್ರಶ್ನಿಸಿದರಲ್ಲದೆ, ನಗರದ ಜನರ ಬವಣೆಯನ್ನು ಸದನದಲ್ಲಿ ಬಿಚ್ಚಿಟ್ಟರು.
ಅಸಮರ್ಪಕ ವ್ಯವಸ್ಥೆ: ಯಾವುದೇ ಯೋಜನೆಗಳು ಹೊಸ ಬಡಾವಣೆಗಳತ್ತ ತಲುಪಿಲ್ಲ. ಸಾರ್ವಜನಿಕರು ಏನನ್ನಾದರು ಕೇಳಿದರೆ ಅಧಿಕಾರಿಗಳು ಬೆಂಗಳೂರಿನತ್ತ ಬೊಟ್ಟು ಮಾಡುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು ಎಂದು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೊಡು ತಿಮ್ಮಪ್ಪ ಮಾಲಕರೆಡ್ಡಿ ಕೇಳುವುದು ಒಂದು, ನೀವು ಹೇಳುವುದು ಇನ್ನೊಂದು. ಮಾಲಕರೆಡ್ಡಿ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಖಮರುಲ್ ಅವರಿಗೆ ಸೂಚಿಸಿದರು.
ನಗರದ ಹೊಸಳ್ಳಿ ಕ್ರಾಸ್, ಬಸವೇಶ್ವರ ನಗರ, ಲಕ್ಷ್ಮೀನಗರ, ಗಂಜ್ ಏರಿಯಾದಲ್ಲಿ ಸರಿಯಾದ ಒಳ ಚರಂಡಿ ವ್ಯವಸ್ಥೆ, ರಸ್ತೆ ಇಲ್ಲ. ತಕ್ಷಣವೇ ಇಲ್ಲಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದರು.
ವಿವಿಧ ಯೋಜನೆಗೆ ವೆಚ್ಚ: ಈ ಪ್ರದೇಶಗಳಿಗೆ ಕೆಯುಐಡಿಎಫ್ಸಿ ವತಿಯಿಂದ ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್ ನೆರವು ಯೋಜನೆಯಡಿ ನೀರು ಸರಬರಾಜು ಸುಧಾರಣೆಗೆ ರು. 7.50 ಕೋಟಿ ಖರ್ಚು ಮಾಡಲಾಗಿದೆ. ಹಾಗಯೇ ರು. 18 ಕೋಟಿ ವೆಚ್ಚದಲ್ಲಿ ಇಡೀ ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ ಎಂದರು. ಇನ್ನೂ ಹಲವು ಕೋಟಿ ವೆಚ್ಚದಲ್ಲಿ ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಶುದ್ಧೀಕರಣ ಘಟಕ ಬೇಕು: ನಗರದ ನೀರು ಶುದ್ಧೀಕರಣ ಘಟಕ ಸುಮಾರು 30 ವರ್ಷಗಳ ಹಿಂದೆ ಆಗಿನ ಜನಸಂಖ್ಯೆಗೆ ಸಾಕಾಗುವಷ್ಟು ಸಾಮರ್ಥ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಈಗ ನಗರದ ಜನಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಿದೆ. ಹಾಗಾಗಿ ನಗರದ ಜನಸಂಖ್ಯೆಗೆ ಅನುಗುಣವಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಶಾಸಕರು ಆಗ್ರಹಿಸಿದರು. ಆಗ ಕಾಗೋಡು ತಿಮ್ಮಪ್ಪ ಮಧ್ಯೆ ಪ್ರವೇಶಿಸಿ, ಇಬ್ಬರೂ ಒಂದೆಡೆ ಕುಳಿತು ಸಮಾಲೋಚಿಸಿ ಹೊಸ ಜಿಲ್ಲಾ ಕೇಂದ್ರ ಯಾದಗಿರಿಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಹೇಳಿದರು.