ಪಡಿತರ ಚೀಟಿ; ಅಪಘಾತಕ್ಕೆ ಅಧಿಕಾರಿಗಳೇ ನೇರ ಹೊಣೆ- ಕರದಾಳ
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಜು.19
ಪಡಿತರ ಚೀಟಿ ನೋಂದಣಿ ಕೆಲಸ ಗ್ರಾಪಂ ಕೇಂದ್ರದಲ್ಲಿ ನಡೆಸಿದ್ದರೆ ತಾಲೂಕಿನ ಯಾಗಾಪುರ ಗ್ರಾಪಂ ವ್ಯಾಪ್ತಿಯ ಫತ್ತುನಾಯಕ ತಾಂಡಾದ 7 ಜನರು ಸಾವನ್ನಪ್ಪುತ್ತಿರಲಿಲ್ಲ. ಆದ್ದರಿಂದ ಚಿತ್ತಾಪುರ ಪಟ್ಟಣದಲ್ಲಿ ನೋಂದಣಿಗೆ ಸೂಚಿಸಿದವರ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮನವಿ ಮಾಡಿದ್ದಾರೆ.
ಪಡಿತರ ಚೀಟಿ ನವೀಕರಣ, ತಿದ್ದುಪಡಿ ಹಾಗೂ ಹೊಸ ನೋಂದಣಿಗಾಗಿ ಗ್ರಾಪಂ ಕೇಂದ್ರದಲ್ಲಿ ಮಾಡಬೇಕೆಂಬ ಆದೇಶವಿದ್ದರೂ, ತಾಲೂಕು ಕೇಂದ್ರದಲ್ಲಿ ಹತ್ತಾರು ಖಾಸಗಿ ಕಂಪ್ಯೂಟರ್ ಕೇಂದ್ರದಲ್ಲಿ ನೋಂದಣಿ ಕೆಲಸ ನಡೆಯುತ್ತಿದೆ. ಸರ್ಕಾರದ ಯೋಜನೆಯಾಗಿದ್ದು, ಕಂಪ್ಯೂಟರ್ನ ಪಾಸ್ವರ್ಡ್ ಖಾಸಗಿಯವರಿಗೆ ಕೊಟ್ಟವರಾರು ಎಂಬುವುದು ಇನ್ನೂ ನಿಗೂಢವಾದ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ತಾಲೂಕಿನ 35 ಗ್ರಾಪಂ ಕೇಂದ್ರಗಳಿಂದ ದೂರದ ಗ್ರಾಮಗಳಿಂದ ಚಿತ್ತಾಪುರ ಪಟ್ಟಣಕ್ಕೆ ಪ್ರತಿ ದಿನ ಹಲವಾರು ಜನರು ಟಂಟಂ, ಇತರ ವಾಹನಗಳಲ್ಲಿ ಆಗಮಿಸುತ್ತಿದ್ದಾರೆ. ಕೆಲವರು ಬೆಂಗಳೂರಿನಲ್ಲಿದ್ದವರು ಇಲ್ಲಿಗೆ ಬಂದು ನಾಲ್ಕೈದು ದಿವಸಗಳಾದರೂ ಅವರ ಕೆಲಸಗಳು ಆಗದೆ ತಮ್ಮ ಗ್ರಾಮಗಳಿಗೆ ವಾಪಸ್ ತೆರಳುತ್ತಿದ್ದಾರೆ ಎಂದರು.
ಕೂಡಲೇ ತಾಲೂಕಿನ ಗ್ರಾಪಂ ಎಲ್ಲ ಕೇಂದ್ರಗಳಲ್ಲಿ ನೋಂದಣಿ ಆರಂಭಕ್ಕೆ ತಹಸೀಲ್ದಾರ್, ಆಹಾರ ಇಲಾಖೆ ಹಾಗೂ ತಾಪಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ಆದರೆ ಇದುವರೆಗೆ ಖಾಸಗಿ ಕೇಂದ್ರಗಳಲ್ಲಿ ನೋಂದಣಿ ಕೆಲಸ ನಿರಂತರವಾಗಿ ನಡೆದಿದೆ. ಇದರಿಂದಾಗಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಮೃತಪಡುತ್ತಿದ್ದಾರೆ. ಹೀಗೆ ಮುಂದುವರೆದರೆ ಮತ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.