ಮುಂಗಾರು ಮಳೆಹಾಡು
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.19
ಮುಂಗಾರು ಮಳೆ ಗುಲ್ಬರ್ಗದಲ್ಲಿ ಗರಿಗೆದರಿದೆ. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿದೆ. ಅದರಲ್ಲೂ ಗುರುವಾರ ಮಧ್ಯಾಹ್ನದಿಂದ ಶುರುವಾಗಿರುವ ಶುಕ್ರವಾರ ರಾತ್ರಿಯವರೆಗೂ ಅಟಕಾಯಿಸಿಕೊಂಡಿದೆ. ಇದರಿಂದಾಗಿ ನಗರ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 4 ದಿನಗಳಿಂದ ಸೂರ್ಯನ ದರುಶನವಾಗಿಲ್ಲ.
ಮೊದಲೇ ಹಾಳಾಗಿದ್ದ ರಸ್ತೆಗಳು ಈ ಮಳೆಗೆ ಸಂಚರಿಸದಂತಾಗಿವೆ. ನಗರದ ಪ್ರಮುಖ ಸಂಪರ್ಕ ಸೇತುವಾಗಿರುವ ಪಿಡಿಎ ಎಂಜಿನಿಯರಿಂಗ್ ಕಾಲೇಜು ಮತ್ತು ಹಳೆ ಜೇವರ್ಗಿ ರಸ್ತೆಯಲ್ಲಿರುವ ರೇಲ್ವೆ ಕೆಳ ಸೇತುವೆಗಳ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಇಲ್ಲಿ ಮೊದಲೇ ಚಂರಡಿ ನೀರು ಮಡುಗಟ್ಟಿ ನಿಲ್ಲುತ್ತಿತ್ತು. ಇದೀಗ ಮಳೆ ನೀರು ಸೇರಿ ರಸ್ತೆ ಸಂಚಾರಕ್ಕೆ ಸವಾಲೊಡ್ಡಿದೆ. ಇದರಿಂದಾಗಿ ರೇಲ್ವೆ ಕೆಳ ಸೇತುವೆ ಬಳಸಿ ಸಂಚರಿಸುವ ವಾಹನ ಸವಾರರು ಕಂಗಾಲಾಗಿದ್ದಾರೆ. ಪಾಲಿಕೆಯವರು ಮತ್ತು ಜಲಮಂಡಳಿ ಈ ರಸ್ತೆಯ ಚರಂಡಿ ಜಾಲ ಸರಿಯಾಗಿ ನಿರ್ವಹಿಸದೆ ಅಲಕ್ಷತನ ತೋರಿದ್ದೇ ಇದಕ್ಕೆ ಕಾರಣ. ಕಿಚಿಪಿಚಿ ಕೆಸರು ರಸ್ತೆಯನ್ನು ಆವರಿಸಿಕೊಂಡಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಇದೇನ್ ಬಂತಪ್ಪಾ... ಎಂದು ಕಿರಿಕಿರಿಗೊಳಗಾಗಿದ್ದಾರೆ.
ಕೃಷಿ ಚಟುವಟಿಕೆ ಸ್ಥಗಿತ: ಮುಂಗಾರು ಮಳೆ ಮಾಯವಾಗಿದ್ದ ಸಂದರ್ಭದಲ್ಲಿ ಪುನರ್ವಸು ಮಳೆ ಸುರಿಯಲಾರಂಭಿಸಿದಾಗ ರೈತರು ನಿಜಕ್ಕೂ ಸಂತಸದಲ್ಲಿದ್ದರು. ಆದರೆ ಜಿಟಿಜಿಟಿಯಾಗಿ ನಿರಂತರ ಸುರಿಯುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಹವಾಮಾನದಲ್ಲಿ ತುಸು ಆರ್ದ್ರತೆ ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಏಕೆಂದರೆ- ನಿರಂತರ ಮಳೆಗೆ ಹೊಲಗದ್ದೆಗಳಲ್ಲಿ ಬಿತ್ತುವ ಕೆಲಸಗಳೇ ಮುಂದೆ ಸಾಗುವುದಿಲ್ಲ ಎಂಬುದು ರೈತರ ಅಳಲು. ಈಗಾಗಲೇ ಜಿಲ್ಲೆಯಲ್ಲಿ ಶೇ.30ರಷ್ಟು ಹೆಸರು, ಉದ್ದು, ಅಲಸಂದಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳು ಬಿತ್ತನೆಯಾಗಿವೆ. ಈಗ ಹೊಲದಲ್ಲೆಲ್ಲಾ ನೀರು ನಿಂತಿರುವುದರಿಂದ ನಾಟಿಯಾಗಿರುವ ಸಸಿಗಳಿಗೆ ತೊಂದರೆಯಾಗುವ ಅಪಾಯಗಳು ಎದುರಾಗಿವೆ.
ನೀರು ಹೊರಹಾಕಲು ಸಲಹೆ: ಗುಲ್ಬರ್ಗ ತಾಲೂಕಿನ ಕೃಷಿ ಸಹಾಯಕ ನಿರ್ದೇಶತಕ ಚಂದ್ರಕಾಂತ ಜೀವಣಗಿ ಈ ಬೆಳವಣಿಗೆಯ ಬಗ್ಗೆ ಆತಂಕ ಹೊರಹಾಕಿದ್ದು, ರೈತರು ಯಾವುದೇ ಉಪಾಯ ಮಾಡುವ ಮೂಲಕ ಹೊಲಗದ್ದೆಗಳಲ್ಲಿನ ನಾಟಿಯಾದ ಬೆಳೆಗಳ ಸುತ್ತ ನಿಂತಿರುವ ನೀರನ್ನು ತಕ್ಷಣ ಹೊರಗೆ ಹಾಕಬೇಕೆಂದು ರೈತರಿಗೆ ಸಲಹೆ ನೀಡಿದ್ದಾರೆ.
ಇಂತಹ ಸತತ ಮಳೆಯಲ್ಲಿ ಬೆಳೆಗಳಿಗೆ ಕಳೆನಾಶಕ ಸಿಂಪಡಿಸಬಾರದು. ಯಾವ ಕಾರಣಕ್ಕೂ ಹೆಚ್ಚು ಪ್ರಮಾಣದಲ್ಲಿನ ನೀರು ಹೊಲಗಳಲ್ಲಿ ನಿಲ್ಲದಂತೆ ಎಚ್ಚರಿಕೆ ವಹಿಸಲೇಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಮಾಹಿತಿಯನ್ನು ರೈತರು ಪಡೆಯಬಹುದಾಗಿದೆ ಎಂದು ಚಂದ್ರಕಾಂತ ಜೀವಣಗಿ ರೈತರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
ರಸ್ತೆಗಳು ಜಲಾವೃತ: ನಗರದಲ್ಲಿರುವ ಪ್ರಮುಖ ರಸ್ತೆಗಳಾದ ಸೂಪರ್ ಮಾರ್ಕೆಟ್ ಸಂಪರ್ಕ ರಸ್ತೆ, ಜೇವರ್ಗಿ ಕ್ರಾಸ್ ರಸ್ತೆ, ಲಾಲಗೇರಿ ಕ್ರಾಸ್ ರಸ್ತೆ, ನ್ಯೂ ರಾಘವೇಂದ್ರ ಕಾಲೋನಿ ರಸ್ತೆಗಳು ಸೇರಿದಂತೆ ಅನೇಕ ಪ್ರಮುಖ ಸಂಪರ್ಕ ರಸ್ತೆಗಳು ಮಳೆಯಿಂದಾಗಿ ಜಲಾವೃತಗೊಂಡು ಎರಡು ದಿನಗಳೇ ಕಳೆದರೂ ಪಾಲಿಕೆ ಈ ವಿಚಾರದಲ್ಲಿ ದಿವ್ಯಮೌನ ತಾಳಿದೆ.
ಇದಲ್ಲದೆ ಅನೇಕ ರಸ್ತೆಗಳು ಹೊಸತಾಗಿ ಕುಳಿ ಬಿದ್ದು ವಾಹನ ಸಂಚಾರಕ್ಕೆ, ಪಾದಚಾರಿ ಸಂಪರ್ಕಕ್ಕೆ ತೊಂದರೆ ಒಡ್ಡುತ್ತಿವೆ. ಇಂತಹ ಸಮಸ್ಯಾತ್ಮಕ ರಸ್ತೆಗಳನ್ನು ಗುರುತಿಸಿ ಅಲ್ಲೆಲ್ಲಾ ತಕ್ಷಣದ ದುರಸ್ತಿ ಕೆಲಸಗಳಿಗೂ ಪಾಲಿಕೆಯ ಯಾವ ಹಂತದಲ್ಲಿಯೂ ಕೆಲಸಕಾರ್ಯಗಳು ಆರಂಭವಾಗುವ ಲಕ್ಷಣಗಳಿಲ್ಲ.
ಗುಲ್ಬರ್ಗ ಜಿಲ್ಲಾದ್ಯಂತ ಮಳೆ ವ್ಯಾಪಕವಾಗಿದೆ. ಎಲ್ಲೆಡೆ ಜಿಟಿಜಿಟಿ ಮಳೆಯೇ ಮುಂದುವರಿದಿದ್ದರಿಂದ ವಾತಾವರಣದಲ್ಲಿ ವಿಪರೀತ ತಂಪು ಕಾಣಿಸಿಕೊಂಡಿದೆ. ರೈತರಂತೂ ಮಳೆ ಹನಿಯುತ್ತಿದೆ ಎಂದು ಬಿತ್ತಲು ಸಿದ್ಧತೆ ಮಾಡಿಕೊಂಡವರು ಇದೀಗ ಮಳೆ ನಿಲ್ಲುವವರೆಗೂ ಕೃಷಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.