ಸೋರುತಿಹುದು ಸ್ಟೇಷನ್ ಬಜಾರ್ ಠಾಣೆ ಮಾಳಿಗೆ...
ಗುಲ್ಬರ್ಗ: ಇಲ್ಲಿನ ರೇಲ್ವೆ ನಿಲ್ದಾಣ ಪಕ್ಕದ ರಸ್ತೆಯಲ್ಲಿರುವ ಸ್ಟೇಷನ್ ಬಜಾರ್ ಠಾಣೆಗೂ ಒಂದೇ ಸವನೆ ಸುರಿಯುತ್ತಿರುವ ಪುನರ್ವಸು ಮಳೆ ಬಿಸಿ ಮುಟ್ಟಿಸಿದೆ. ಈ ಸತತ ಮಳೆಯಿಂದಾಗಿ ಠಾಣೆಯ ಸೂರು ಸೋರಲಾರಂಭಿಸಿದೆ. ಇದರಿಂದಾಗಿ ಕರೆಂಟ್ ಸಹ ಈ ಠಾಣೆಯ ಕಬ್ಬಿಣದ ಸರಳುಗಳು ಹಾಗೂ ಗೋಡೆಯಲ್ಲಿ ಇಳಿದು ಅನೇಕರಿಗೆ ಶಾಕ್ ನೀಡಿದೆ.
ಶುಕ್ರವಾರ ಠಾಣೆಯ ಸಿಬ್ಬಂದಿ ಮಾಳಿಗೆ ಸೇರಿ ಸಂಭವಿಸಬಹುದಾಗಿದ್ದ ಅನಾಹುತದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ತಕ್ಷಣ ವಿದ್ಯುತ್ ಶಕ್ತಿ ಗೋಡೆ, ಕಿಟಕಿಗಳಲ್ಲಿ ಪ್ರವಹಿಸದಂತೆ ಎಚ್ಚರಿಕೆ ವಹಿಸಿ ಪ್ರತಿಬಂಧಕ ಉಪಾಯಗಳನ್ನು ಮಾಡಿದ್ದರಿಂದ ಯಾವುದೇ ಅನಾಹುತ ಅಲ್ಲಿ ಸಂಭವಿಸಲಿಲ್ಲ.
ಠಾಣೆಯ ಕಡತ ಕೋಣೆ, ಪಿಎಸ್ಐ ಸೇರಿದಂತೆ ಇರುವ ಎಲ್ಲರ ಚೆಂಬರ್ಗಳ ಗೋಡೆಗಳು ತಂಪು ಹಿಡಿದಿವೆ. ಈ ಠಾಣೆಯ ಕಟ್ಟಡ ತುಂಬ ಹಳೆಯದಾಗಿದೆ. ಇದರಿಂದಾಗಿ ಠಾಣೆಯೇ ಸೋರಲಾರಂಭಿಸಿದೆ. ಇದರಿಂದ ಮಳೆಯ ಈ ದಿನಗಳಲ್ಲಿ ಅದ್ಹೇಗೆ ಕೆಲಸ ನಿರ್ವಹಿಸುವುದು ಎಂದು ಪೊಲೀಸರೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.