ಎಚ್ಕೆಇ ದಾಖಲೆಗಳ ಮೇಲೆ ಐಟಿ ಕ್ಷಕಿರಣ
ಕ.ಪ್ರ. ವಾರ್ತೆ ಗುಲ್ಬರ್ಗ ಜು. 20
ಇಲ್ಲಿನ ಹೈ- ಕ ಶಿಕ್ಷಣ ಸಂಸ್ಥೆ ಕೇಂದ್ರ ಕಚೇರಿ ಮೇಲೆ ನಡೆದಿರುವ ಐಟಿ ದಾಳಿ ಅಲ್ಲಿನ ಗಣಕ ಯಂತ್ರಗಳು ಹಾಗೂ ಕಡತಗಳಲ್ಲಿನ ದಶಕದ ಹಿಂದಿನ ದಾಖಲೆಗಳು, ಸೀಟು ಹಂಚಿಕೆ ಹಾಗೂ ಇತರೆ ಹಣಕಾಸು ವಹಿವಾಟುಗಳ ಮೇಲೆ ಹೆಚ್ಚಿನ ಒತ್ತು ಕೊಟ್ಟಿದೆ ಎಂದು ತಿಳಿದು ಬಂದಿದೆ.
ಉನ್ನತ ಮೂಲಗಳ ಪ್ರಕಾರ ಇಲ್ಲಿನ ಪಿಡಿಎ ಕಾಲೇಜು ಕ್ಯಾಂಪಸ್ಸಿಗೆ ಈಚೆಗಷ್ಟೇ ಸ್ಥಳಾಂತರಗೊಂಡಿರುವ ಸಂಸ್ಥೆಯ ಹೊಸ ಕಚೇರಿಗೆ ಆಗಮಿಸಿದ ಐಟಿ ಅಧಿಕಾರಿಗಳು ಹಾಗೆ ಬಂದವರೇ ಅಲ್ಲಿನ ಗಣಕ ಯಂತ್ರಗಳ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ್ದಲ್ಲದೆ ಅಲ್ಲಿದ್ದ ಸಿಬ್ಬಂದಿಗಳನ್ನು ತಮ್ಮ ಗುರುತು- ಪತ್ತೆ ತಿಳಿಸುತ್ತ ಎಲ್ಲರ ಬಳಿಯ ಮೊಬೈಲ್ ಪಡೆದದ್ದಲ್ಲದೆ, ಯಾರನ್ನೂ ಹೊರಗೆ ಹೋಗಲು ಬಿಡದಂತೆ ಅಲ್ಲಿನ ಕಡತಗಳ ಮೂಟೆಗಳನ್ನೆಲ್ಲ ತರಿಸಿ ಪರಿಶೀಲಿಸಿದ್ದಾರೆ.
ಕಳೆದ 3 ವರ್ಷಗಳ ಹಿಂದೆ ರಾಜ್ಯದಲ್ಲಿ ಬಹುದೊಡ್ಡ ಸುದ್ದಿ ಮಾಡಿದ್ದ ಮೆಡಿಕಲ್ ಡ್ರಾಪ್ ಓಟ್ ಸೀಟ್ ಹಗರಣದಲ್ಲಿ ಗುಲ್ಬರ್ಗದ ಹೈಕಶಿ ಸಂಸ್ಥೆಯ ಹೆಸರು ಪ್ರತಿಧ್ವನಿಸಿತ್ತು. ಜೊತೆಗೆ ಸಂಸ್ಥೆಯ ಆಗಿನ ಅಧ್ಯಕ್ಷರು, ಕೌನ್ಸಿಲ್ರಗಳ ಹೆಸರುಗಳೂ ಹಗರಣದಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಿದ್ದವಲ್ಲದೆ, ಬೆಂಗಳೂರು ತಿಲಕ ನಗರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನೂ ನಡೆಸಿದ್ದರು.
ಕಾಮೆಡ್ - ಕೆ ಮಾಹಿತಿ ಹೆಕ್ಕಿದರು: ಐಟಿ ದಾಳಿಯ ಸಂದರ್ಭದಲ್ಲಿ ಸಂಸ್ಥೆ ಕಾಮೆಡ್ ಕೆ ಸೀಟುಗಳನ್ನು ಹಂಚಿಕೆ ಮಾಡಿರುವ ವಿಚಾರಗಳ ಮೇಲೆ ಹೆಚ್ಚಿನ ಒತ್ತು ತನಿಖಾಧಿಕಾರಿಗಳು ನೀಡಿದ್ದಲ್ಲದೆ ಈ ಸಂಸ್ಥೆಯಲ್ಲಿ ಕಳೆದೊಂದು ದಶಕದಿಂದ ಪೇಮೆಂಟ್ ಸೀಟು, ಮ್ಯಾನೇಜ್ಮೆಂಟ್ ಸೀಟುಗಳನ್ನು ಪಡೆದವರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಮೆಡಿಕಲ್ ಡ್ರಾಪ್ ಔಟ್ ಸೀಟು ಹಗರಣದಲ್ಲಿ ಬಹುಕೋಟಿ ರುಪಾಯಿ ಅವ್ಯವಹಾರ ಸದ್ದು ಮಾಡಿತ್ತು. ಹೀಗಾಗಿ ಐಟಿ ದಾಳಿಯ ಮೂಲ ಉದ್ದೇಶ ಇಂತಹ ಹಗರಣಗಳನ್ನೆಲ್ಲ ಹೆಕ್ಕಿ ತೆಗೆದು ಮೂಲ ದಾಖಲೆಗಳನ್ನು ಪರಿಶೀಲಿಸುವುದೇ ಆಗಿದೆ ಎಂದು ತಿಳಿದು ಬಂದಿದ್ದು ದಾಳಿ ಸಂದರ್ಭದಲ್ಲಿ ತಂಡ ಈ ಕೆಲಸವನ್ನು ಬಲು ನಾಜೂಕಾಗಿ ಮಾಡಿ ಮುಗಿಸಿದೆ ಎನ್ನಲಾಗಿದೆ.
ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿತ್ತು: ಮೆಡಿಕಲ್ ಡ್ರಾಪ್ ಔಟ್ ಸೀಟುಗಳ ವಿಚಾರದಲ್ಲಿ ಗುಲ್ಬರ್ಗದಿಂದಲೂ ಹೋರಾಟಗಾರರು ಹಲವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ದೂರುಗಳಿಗೆ ಪ್ರತಿಯಾಗಿ ಸ್ವೀಕೃತಿ ಪತ್ರವೂ ಹೋರಾಟಗಾರರ ಕೈ ಸೇರಿತ್ತು.
ಈಚೆಗಷ್ಟೆ ಅನೇಕರು ರಾಜ್ಯಪಾಲರಿಗೆ ಮರುಪತ್ರ ಬರೆದು ತಾವು ನೀಡಿದ ದೂರಿನ ಸ್ಥಿತಿಗತಿ ವಿಚಾರಿಸಿದಾಗ ಅಲ್ಲಿಂದ ದೂರು ರಾಜ್ಯಪಾಲರ ಮುಂದಿದೆ ಎಂಬ ಉತ್ತರವನ್ನೂ ಪಡೆದಿದ್ದಾರೆ.
ಈಗ ನಡೆದಿರುವ ದಾಳಿ, ಅದರ ಹಿಂದಿನ ಉದ್ದೇಶ, ದಾಳಿ ಕಾಲದಲ್ಲಿ ಐಟಿ ಅಧಿಕಾರಿಗಳು ಯಾವೆಲ್ಲ ದಾಖಲೆಗಳ ಪರಿಶೀಲನೆಗೆ ಒತ್ತು ನೀಡಿದ್ದಾರೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಅನೇಕ ಸಂಸ್ಥೆಯ ವಿರುದ್ಧ ಆಗಾಗ ಸದ್ದು ಮಾಡುತ್ತಿದ್ದ ದೂರುಗಳ ಫಲಶೃತಿ ಇದು ಎನ್ನಬಹುದಾಗಿದೆ.
1958 ರಲ್ಲಿ ತಲೆ ಎತ್ತಿರುವ, ಈ ಭಾಗದ ಉನ್ನತ ಶಿಕ್ಷಣ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದಂತಹ ಸಂಸ್ಥೆಯ ಮಹತ್ವದ ದಾಖಲೆಗಳೆಲ್ಲವೂ ಸದ್ಯ ಐಟಿ ವಶದಲ್ಲಿವೆ. ಅದರಲ್ಲೂ ಈಚೆಗಿನ ದಶಕದ ದಾಖಲೆಗಳನ್ನಂತೂ ಐಟಿ ಅಧಿಕಾರಿಗಳು ತುಂಬ ಲಕ್ಷ್ಯ ಕೊಟ್ಟು ಕಲೆ ಹಾಕಿದ್ದಾರೆ. ಈ ದಾಖಲೆಗಳು ಸಂಸ್ಥೆಯಲ್ಲಿ ಏನು ನಡೆಯಿತು. ಏನಿಲ್ಲ ಎಂಬುದಕ್ಕೆ ಕನ್ನಡಿ ಹಿಡಿಯುವುದಂತೂ ನಿಶ್ಚಿತ. ಸಂಸ್ಥೆಯ ಐಟಿ ದಾಳಿ ಹೈ- ಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪ್ರಗತಿ ಸಹಿಸದವರ ಹುನ್ನಾರ- ನಮೋಶಿ: ತಾವು ಸಂಸ್ಥೆ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ, ತಮ್ಮ ಪಾರದರ್ಶಕ ಆಡಳಿತ ಸಹಿಸದವರು ಹಲವರು ಸೇರಿ ಐಟಿ ದಾಳಿಗೆ ಕಾರಣರಾಗಿದ್ದಾರೆ. ಇದರ ಹಿಂದೆ ರಾಜಕೀಯವೂ ಅಡಗಿದೆ ಎಂದು ಹೈಕಶಿ ಸಂಸ್ಥೆ ಅಧ್ಯಕ್ಷ ಶಶಿಲ್ ನಮೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ನಮೋಶಿ ತಾವು ಅಧ್ಯಕ್ಷರಾದಗಿನಿಂದ ಸಂಸ್ಥೆಯಡಿಯಲ್ಲಿನ ಕಾಲೇಜುಗಳು, ಬಸವೇಶ್ವರ ಬೋಧಾನ ಆಸ್ಪತ್ರೆ ಇತ್ಯಾದಿಗಳಲ್ಲಿ ಕೈಗೊಂಡ ಜನಪರ ಹಾಗೂ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತ ಸಂಸ್ಥೆಯ ಬೆಳವಣಿಗೆಗೆ ಇಷ್ಟೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಸಹ ಏಳಿಗೆ ಸಹಿಸದವರು ದಾಳಿಗೆ ಕುಮ್ಮಕ್ಕು ನೀಡುತ್ತಿರುವುದು ವಿಷಾದನೀಯ ಎಂದರು.
- ಶೇಷಮೂರ್ತಿ ಅವಧಾನಿ