ಶಂಕುಸ್ಥಾಪನೆ ಮುಂದಕ್ಕೆ
ಗುಲ್ಬರ್ಗ: ಗುಲ್ಬರ್ಗ ಮತ್ತು ಹೋಟಗಿ ನಡುವೆ ರೇಲ್ವೆ ಜೋಡಿ ಹಳಿ ಮತ್ತು ರೇಲ್ವೆ ನಿಲ್ದಾಣದ ಹೊಸ ಪ್ಲಾಟ್‌ಫಾರ್ಮ ಸಂಖ್ಯೆ 4ರ ನಿರ್ಮಾಣ ಕಾಮಗಾರಿಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಜು.22ರಂದು ನೆರವೇರಿಸಬೇಕಾಗಿದ್ದ ಶಂಕುಸ್ಥಾಪನೆ ಕಾರ್ಯಕ್ರಮ ಜು.23ಕ್ಕೆ ಮುಂದೂಡಲಾಗಿದೆ. ಅಂದು ಬೆ.11 ಗಂಟೆಗೆ ನಗರದ ಡಾ. ಎಂ.ಎಸ್. ಪಂಡಿತ ರಂಗಮಂದಿರಲ್ಲಿ ಕಾರ್ಯಕ್ರಮ ಜರುಗಲಿದೆ.
ಬೈಕ್ ಕಳ್ಳರ ಬಂಧನ
ಜೇವರ್ಗಿ: ಹೊರ ರಾಜ್ಯದಲ್ಲಿ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಶನಿವಾರ ಬಂಧಿಸಿದ ಪೊಲೀಸರು 4.50 ಲಕ್ಷ ಮೌಲ್ಯದ ಬೈಕ್ ಜಪ್ತಿ ಮಾಡಿದ್ದಾರೆ.
ಆಳಂದ ತಾಲೂಕಿನ ಭೂಸನೂರ ಗ್ರಾಮದ ಲಕ್ಷ್ಮೀಕಾಂತ ಛತ್ರಿ, ಅಕ್ಕಲಕೋಟ ತಾಲೂಕಿನ ಕಲ್ಲಹಿಪ್ಪರಗಾ ಗ್ರಾಮದ ಸಿದ್ದು ಛತ್ರಿ, ಪ್ರಶಾಂತ ಮೋರೆ, ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ಬಸವರಾಜ ಟೋಕಾಪುರ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಡೆಯಾಜ್ಞೆ ತೆರವು:
ಚುನಾವಣೆ ಪ್ರಕ್ರಿಯೆ ಶುರು
ಗುಲ್ಬರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಲು ತಾತ್ಕಾಲಿಕವಾಗಿ ಹೇರಿರುವ ತಡೆಯಾಜ್ಞೆ ನ್ಯಾಯಾಲಯವು ತೆರವುಗೊಳಿಸಿ ಆದೇಶ ಹೊರಡಿಸಿದೆ. ಕಳೆದ 15ರಂದು ಅಭಿಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ನರಸಿಂಹಲು ಅವರು ಗುಲ್ಬರ್ಗ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹಾಕಿ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣೆಯ ಮುಂದಿನ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಕೋರಿರುವ ಹಿನ್ನೆಲೆನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಸಂಘದ ಕಾರ್ಯದರ್ಶಿಗಳು ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿರುವುದರಿಂದ ನ್ಯಾಯಾಲಯವು ಜು.19ರಂದು ತಡೆಯಾಜ್ಞೆ ತೆರವುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆ ಪ್ರಕ್ರಿಯೆ ಮಂದುವರಿಸಲಾಗುವುದು.
ಭೋಸ್ ಪ್ರತಿಮೆಗೆ
ಅವಮಾನ: ಕ್ರಮಕ್ಕೆ ಆಗ್ರಹ
ಗುಲ್ಬರ್ಗ: ನಗರದ ಗಂಜ್ ಮುಖ್ಯರಸ್ತೆಯಲ್ಲಿರುವ ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಪ್ರತಿಮೆ ಕಟ್ಟೆಗೆ ಸಗಣಿ ಎರಚಿ ಅಪಮಾನ ಮಾಡಿರುವ ಕ್ರಮ ಖಂಡಿಸಿರುವ ನೇತಾಜಿ ನಾಗರಿಕ ಸಮಿತಿ ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೋರಾಟಗಾರ ವಿದ್ಯಾಧರ ಗುರೂಜಿ, ಧರ್ಮವೀರ ಗಂಪಾ, ಸೋಮಶೇಖರ ಮಠಪತಿ, ಲಕ್ಷ್ಮೀಕಾಂತ ನೂಲಾ, ಡಿ.ವಿ. ಪಾಟೀಲ್, ಶ್ರೀಶೈಲ್ ಇತರರು ಎಚ್ಚರಿಸಿದ್ದಾರೆ.
ಇಂದು ಪದಗ್ರಹಣ
ಗುಲ್ಬರ್ಗ/ಶಹಾಹಾದ್: ಚಿತ್ತಾಪುರ ತಾಲೂಕು ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾದ ಶಶಿಕಾಂತ ಪಾಟೀಲ್ ಬೆಳಗುಂಪಾ ಅವರು ಭಾನುವಾರ ಬೆ.11 ಗಂಟೆಗೆ ಚಿತ್ತಾಪುರ ಕಿಂಗ್ ಪ್ಯಾಲೇಸ್ ಸಭಾಂಗಣದಲ್ಲಿ ಅಧಿಕಾರ ಗ್ರಹಣ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಮುಖಂಡ ಶರಣು ಜ್ಯೋತಿ ರಾವೂರ ತಿಳಿಸಿದ್ದಾರೆ.
ಗುರುಪೂರ್ಣಿಮೆ ನಾಳೆ
ಗುಲ್ಬರ್ಗ: ನಗರದ ಜಿಡಗಾ- ಮುಗಳಖೋಡ ಮಠದ ನವಕಲ್ಯಾಣ ಮಠದಲ್ಲಿ ಜು.22ರಂದು ಗುರು ಪೂರ್ಣಿಮಾ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಜಿಡಗಾದ ಸಿದ್ದರಾಮೇಶ್ವರ ಸ್ವಾಮೀಜಿ ಕರ್ತೃ ಗದ್ದುಗೆಗೆ ಅವರ ಕರ ಸಂಜಾತರಾದ ಡಾ. ಮುರುಘರಾಜೇಂದ್ರ ಸ್ವಾಮೀಜಿ ಅಮೃತ ಹಸ್ತದಿಂದ ಮಹಾರುದ್ರಾಭಿಷೇಕ, ಇಷ್ಟಲಿಂಗ ಪೂಜೆ ಮತ್ತು ಸಂಜೆ 5.30ಕ್ಕೆ ಶ್ರೀಗಳ ಸಿಂಹಾಸನಾರೋಹಣ, ಪಾದಪೂಜೆ, ತುಲಾಭಾರ, ಸುವರ್ಣ ಕಿರೀಟಧಾರಣೆ, ಪುಷ್ಪ ಬಿಲ್ವಾರ್ಚನೆ ನಡೆಯಲಿವೆ. ನಾಡಿನ ಮಠಾಧೀಶರು, ರಾಜಕೀಯ ಧುರೀಣರು, ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಭಕ್ತಾದಿಗಳು ಭಾಗವಹಿಸಬೇಕು. ಮಾಹಿತಿಗಾಗಿ ಮೊ. 9980359209ಗೆ ಸಂಪರ್ಕಿಸಬಹುದು ಎಂದು ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ರೋಗಿಗಳಿಗೆ ಹಣ್ಣು ವಿತರಣೆ
ಯಾದಗಿರಿ: ಜೈಕರವೇ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಪಾಟೀಲ್ ಜನ್ಮದಿನ ನಿಮಿತ್ತ ಸಂಘಟನೆ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಿದರು. ಡಾ.ಅನ್ವರ, ಜಿಲ್ಲಾಧ್ಯಕ್ಷ ಬಾಪುಗೌಡ ಪಾಟೀಲ್ ಮುಷ್ಟೂರ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಾಂತ ಭೀಮನಳ್ಳಿ, ಇಮ್ರಾನ ಮುಂಡರಗಿ, ಧರ್ಮಣ್ಣ, ಧನರಾಜ, ಕೃಷ್ಣರೆಡ್ಡಿ ಬಬಲಾದ, ದೇವರಾಜ, ಪವನ, ಬೆಂಜಮೇನ, ಮಹೆಬೂಬ, ಸುಧೀರ, ಮೌನೇಶ ಇದ್ದರು.
ಹಾವು ಕಚ್ಚಿ ಕೃಷಿ ಕಾರ್ಮಿಕ ಸಾವು
ಯಾದಗಿರಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಹೊನ್ನಪ್ಪ(50) ಮೃತಪಟ್ಟ ವ್ಯಕ್ತಿ. ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ: ಮತದಾನಕ್ಕೆ ನೌಕರರಿಗೆ ಕಾಲಾವಕಾಶ
ಯಾದಗಿರಿ: 2013ರಿಂದ 2018ರ ಅವಧಿಗಾಗಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾರ್ವತ್ರಿಕ ಚುನಾವಣೆ ಜು. 22ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿರುವ ಪ್ರಯುಕ್ತ ಸರ್ಕಾರದಿಂದ ಅಧಿಕೃತ ಜ್ಞಾಪನಾ ಪತ್ರದನ್ವಯ ಚುನಾವಣೆಯಲ್ಲಿ ಮತ ಚಲಾಯಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಿಗೆ ಮತದಾನ ಮಾಡಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ,ಪ್ರಸ್ತಾವನೆಗೆ ಆಹ್ವಾನ
ಯಾದಗಿರಿ: ಪ್ರತಿ ವರ್ಷದಂತೆ ಈ ವರ್ಷವೂ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಮಾಜ ಸೇವೆ, ಜಾನಪದ, ಸಂಶೋಧನೆ, ಕ್ರೀಡೆ, ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಜಿಲ್ಲೆಗೆ ಕೀರ್ತಿ ತಂದ ಸಾಧಕರನ್ನು ಗುರುತಿಸಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲು ನಿರ್ಧರಿಸಿ ಸಮಿತಿಯೊಂದನ್ನು ರಚಿಸಲಾಗಿದೆ. ಕಾರಣ ಅಂತಹ ಸಾಧಕರು ಹಾಗೂ ಸಾಧಕರ ಬಗ್ಗೆ ವಿವರ ಮಾಹಿತಿ ಸಂಗ್ರಹಿಸಿರುವ ಸಾರ್ವಜನಿಕರು ಆ.3ರಂದು ಸಂಜೆ 5ರೊಳಗಾಗಿ ಸಾಧನೆಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಸಹಾಯಕ ಆಯುಕ್ತರ ಕಚೇರಿ ಯಾದಗಿರಿ ಅವರಿಗೆ ಪ್ರಸ್ತಾವನೆಗಳನ್ನು ಸಲ್ಲಿಸಬೇಕೆಂದು ಸಹಾಯಕ ಆಯುಕ್ತ ವಿಜಯ್ ತಿಳಿಸಿದ್ದಾರೆ.
'ಶಿಕ್ಷಣ ಕ್ಷೇತ್ರಕ್ಕೆ ಬ್ಯಾಂಕ್‌ನ ಸೇವೆ'
ಸುರಪುರ: ರಾಷ್ಟ್ರೀಕೃತ ಬ್ಯಾಂಕ್‌ಗಳು ಇಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿರುವುದರ ಮೂಲಕ ಸೇವಾ ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳುತ್ತಿವೆ ಎಂದು ಸ್ಥಳೀಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕಾಶಿರಾಯ ಹೇಳಿದರು. ಸಮೀಪದ ರಂಗಂಪೇಟೆಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ 5 ಸೀಲಿಂಗ್ ಫ್ಯಾನ್‌ಗಳನ್ನು ಬ್ಯಾಂಕ್ ವತಿಯಿಂದ ಉಚಿತವಾಗಿ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬ್ಯಾಂಕ್ ಇತರೆ ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ತಿಳಿಸಿದರು. ಬ್ಯಾಂಕಿನ ಅಧಿಕಾರಿ ಸುಧಾಕರ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಜೀವನದಲ್ಲಿ ಮಾನವೀಯ ಮೌಲ್ಯ, ಶಿಸ್ತು, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ತನ್ನತನ ಉಳಿಸಿಕೊಂಡು ಹೆತ್ತ ತಂದೆ-ತಾಯಿಯರನ್ನು, ಕಲಿಸಿದ ಗುರು-ಹಿರಿಯರನ್ನು ಕಡೆಗಣಿಸದೇ ಅವರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಾಲೆಯ ಮುಖ್ಯಗುರು ಬಸವರಾಜ ಉಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ಬಾಲರಾಜ ತುಪ್ಪದ ಮಾತನಾಡಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ಶಾಲೆಯ ವತಿಯಿಂದ ಸತ್ಕರಿಸಲಾಯಿತು. ಶಿವಶಂಕರ ಪತಂಗಿ ಸ್ವಾಗತಿಸಿದರು. ಭೀಮರಾಯ ಹೂಗಾರ ನಿರೂಪಿಸಿದರು. ಭೀಮಪ್ಪ ಜಕನೂರು ವಂದಿಸಿದರು.