ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಸ್ತಿನ ಪಕ್ಷದಲ್ಲಿ ಒಡಕು, ಸಭೆ ಅರ್ಧಕ್ಕೇ ಮೊಟಕು

Vishwanath S
Updated On : 21 Jul 2013, 1:18 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.20
ತಾನು ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುತ್ತಿದ್ದ ಇಲ್ಲಿನ ಭಾರತೀಯ ಜನತಾ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಶನಿವಾರ ಆ ಪಕ್ಷದ ಗ್ರಾಮೀಣ ಹಾಗೂ ನಗರ ಘಟಕದ ಅಧ್ಯಕ್ಷರ ಆಯ್ಕೆ ಸಭೆ ಕನ್ನಡಿಯಾಯ್ತು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಪಕ್ಷದ ಜಿಲ್ಲಾ ಹಾಗೂ ನಗರ ಘಟಕಗಳ ಅಧ್ಯಕ್ಷರು ಯಾರ್ಯಾರು ಎಂಬುದನ್ನು ಪ್ರಕಟಿಸುತ್ತಿದ್ದಂತೆಯೇ ಕಾರ್ಯಕರ್ತರು ತೀವ್ರ ಗೊಂದಲಕ್ಕೆ ಮುಂದಾದಾಗ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಗೌಡರು ಹೊರ ನಡೆದರು.
ತೇಲ್ಕೂರ್-ಶಾಬಾದಿ ಪುನರಾಯ್ಕೆ: ಈ ಮೊದಲು ನಗರಾಧ್ಯಕ್ಷರಾಗಿ ವಿದ್ಯಾಸಾಗರ ಶಾಬಾದಿ ಮತ್ತು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ್ 3 ವರ್ಷ ಪೂರ್ಣಗೊಳಿಸಿದ್ದು, ಶನಿವಾರ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಪಕ್ಷದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಸಮ್ಮುಖದಲ್ಲಿ ನೂತನ ನಗರ ಮತ್ತು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಆಯ್ಕೆ ಮಾಡುವ ಪ್ರಕ್ರಿಯೆಗೆ ಮೂಹರ್ತ ನಿಗದಿಯಾಗಿತ್ತು. ಮ.2.30ಕ್ಕೆ ಸಭೆ ನಿಗದಿಯಾಗಿತ್ತು. ಸದಾನಂದಗೌಡರು ಗುಲ್ಬರ್ಗಕ್ಕೆ ಸಂಜೆ 5 ಗಂಟೆಗೆ ಆಗಮಿಸಿ ಸಭೆ ನಡೆಯುವ ಸ್ಥಳಕ್ಕೆ ಹೋಗದೆ ನೇರವಾಗಿ ನಗರದ ಐವಾನ್-ಇ-ಶಾಹಿ ಅತಿಥಿಗೃಹಕ್ಕೆ ತೆರಳಿ ಅಲ್ಲಿ ಸರಣಿ ಸಂಧಾನ ಸಭೆಗಳನ್ನು ನಡೆಸಿದ್ದರು ಎನ್ನಲಾಗಿದೆ.
ತಡೆದರು: ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾದ ಜೇವರ್ಗಿ ತಾಲೂಕಿನ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಮತ್ತು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ ಮತ್ತು ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಅವರ ಬೆಂಬಲಿಗರು ತಮ್ಮ ನಾಯಕರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಪಟ್ಟು ಹಿಡಿದು ಸಭೆಗೆ ಹೋಗದಂತೆ ಒಂದು ಗಂಟೆ ಕಾಲ ತಡೆ ಹಿಡಿದರು. ಆಗ ಸದಾನಂದಗೌಡರು ಪಕ್ಷದ ರಾಜ್ಯಾಧ್ಯಕ್ಷರಿಗೆ ಮೊಬೈಲ್ ಮೂಲಕ ಮಾತುಕತೆ ನಡೆಸಿ, ಸಭೆಯಲ್ಲೇ ಘೋಷಣೆ ಮಾಡುವುದಾಗಿ ಹೇಳಿದರು.
ಸದಾನಂದಗೌಡರು ಸಭೆಯಲ್ಲಿ ನಗರ ಅಧ್ಯಕ್ಷರಾಗಿ ವಿದ್ಯಾಸಾಗರ ಶಾಬಾದಿ ಮತ್ತು ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ರಾಜಕುಮಾರ್ ಪಾಟೀಲ್ ತೇಲ್ಕೂರ್ ಪುನರಾಯ್ಕೆಗೊಂಡಿದ್ದಾರೆ ಎಂದು ಘೋಷಣೆ ಮಾಡಿದರು. ಇದಾದ ಕೆಲವು ನಿಮಿಷಗಳಲ್ಲಿಯೇ ಶಿಸ್ತಿನ ಪಕ್ಷದಲ್ಲಿ ಗದ್ದಲ ಸ್ಫೋಟವಾಯಿತು.
ಅಧ್ಯಕ್ಷರ ಆಕಾಂಕ್ಷಿಗಳ ಅಭಿಮಾನಿಗಳು ಪುನರಾಯ್ಕೆಗೊಂಡ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಲು ಆರಂಭಿಸಿರುವುದರಿಂದ ಸಭಾಂಗಣ ಸಂಪೂರ್ಣ ಗೊಂದಲದ ಗೂಡಾಗಿತ್ತು. ಹೊಸ ಮುಖಗಳಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬಂತು.
'ಸದಾ' ಹೊರಕ್ಕೆ: ಆಗ ಪ್ರಮುಖ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮತ್ತು ಶರಣಪ್ಪ ತಳವಾರ ಅವರು ವೇದಿಕೆಯಿಂದ ಧ್ವನಿವರ್ಧಕದಿಂದ ಶಾಂತರಾಗಿ ಕೈ ಮುಗಿದುಕೊಳ್ಳುತ್ತೇವೆ ಎಂದು ಹೇಳಿದರೂ ಕಿವಿಗೊಡದ ಕಾರ್ಯಕರ್ತರು ಪುನರಾಯ್ಕೆಗೊಂಡ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗುತ್ತಲೇ ಸಾಗಿದ್ದರು. ಎಲ್ಲ ಬೆಳವಣಿಗೆಯನ್ನು ಮೂಕಪ್ರೇಕ್ಷಕರಾಗಿ ವೀಕ್ಷಿಸಿದ ಸದಾನಂದಗೌಡರು ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement