ನಾಯಿಗಳ ಹಾವಳಿ ತಡೆಗೆ ಪಾಲಿಕೆ ಕ್ರಮ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.21
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅವುಗಳ ಹಾವಳಿ ತಡೆಗೆ ದೂರು ಬಂದಲ್ಲೆಲ್ಲಾ ಕ್ರಮಕ್ಕೆ ಮುಂದಾಗಿದೆ.
ನಾಯಿಗಳ ಹಾವಳಿ ಕಾಣಿಸಿಕೊಂಡಿದ್ದರಿಂದ 'ನಿವಾಸಿಗಳ ಬದುಕು 'ನಾಯಿ'ಪಾಡು!' ಎಂದು 'ಕನ್ನಡಪ್ರಭ' 2 ದಿನಗಳ ಹಿಂದಷ್ಟೆ ವಿಶೇಷ ವರದಿ ಪ್ರಕಟಿಸಿ ಪಾಲಿಕೆಯನ್ನು ಎಚ್ಚರಿಸಿತ್ತು.
ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಾಯಿಗಳ ಹಿಂಡು ಜನರನ್ನು ತೊಂದರೆಗೆ ದೂಡಿದ್ದವು. ಇದರಿಂದ ಜನತೆಯೂ ಕಂಗಾಲಾಗಿದ್ದನ್ನು ಸ್ಮರಿಸಬಹುದಾಗಿದೆ. ಪಾಲಿಕೆ ಕೊನೆಗೂ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿದೆ. ಇದು ಕೇವಲ ಪ್ರಚಾರದ ಗಿಮಿಕ್ ಆಗಿರದೆ ಆದ್ಯತೆ ಮೇರೆಗೆ ಎಲ್ಲೆಲ್ಲಿ ದೂರುಗಳು ಬರುತ್ತವೆಯೋ ಅಲ್ಲೆಲ್ಲಾ ನಾಯಿಗಳ ಹಾವಳಿ ತಗ್ಗಿಸಲು ಪಾಲಿಕೆ ಕ್ರಮಕ್ಕೆ ಮುಂದಾಗಬೇಕು ಎಂಬುದು ಜನರ ಆಗ್ರಹ.