ಪ್ರಾಚೀನ ಭಾಷೆಗಳ ಪೈಕಿ ಕನ್ನಡಕ್ಕೆ ಎರಡನೇ ಸ್ಥಾನ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜು.21
ಪ್ರಾಚೀನ ಭಾಷೆಗಳ ಪೈಕಿ ಕನ್ನಡ ಭಾಷೆ ಎರಡನೇ ಸ್ಥಾನ ಪಡೆದುಕೊಂಡಿದೆ. ಕನ್ನಡದ ಉಳಿವಿಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಹೇಳಿದರು.
ಶಾಮ್‌ಕುಮಾರ ದಾಸನ್ ಸ್ಮರಣಾರ್ಥ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಕುತ್ತು ಬರುತ್ತಿದೆ ಎಂದು ನಾವು ಆತಂಕ ವ್ಯಕ್ತಪಡಿಸುತ್ತಿದ್ದೇವೆ. ಆದರೆ ಆಳವಾಗಿ ಯೋಚನೆ ಮಾಡಿದಾಗ ಬಹುತೇಕ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ತೀವ್ರ ಹೊಡೆತ ಬೀಳುತ್ತಿದೆ. ಎಲ್ಲ ಭಾಷೆಗಳಿಗೆ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನಾವು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಯನ: ಪ್ರತಿಯೊಬ್ಬರೂ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿ ಅಧ್ಯಯನ ಮಾಡಿದರೆ ಅನುಕೂಲ ಆಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ ಅಧ್ಯಯನ ಮಾಡಿ ಕೂಡ ಉನ್ನತ ಸ್ಥಾನಕ್ಕೇರಬಹುದು. ಇದನ್ನು ಎಲ್ಲರೂ ಮನಗಾಣಬೇಕಿದೆ. ಕನ್ನಡ ಸಾಹಿತ್ಯ ತನ್ನದೇ ವಿಭಿನ್ನತೆಯಿಂದಾಗಿ ವಿಶೇಷ ಛಾಪು ಮೂಡಿಸಿದೆ. ಇದರಿಂದಾಗಿ ಮಹಾನ್ ಕವಿಗಳು ಹಲವಾರು ಕೃತಿಗಳನ್ನು ರಚನೆ ಮಾಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಬೇರೂರಿದ್ದಾರೆ ಎಂದು ಹೇಳಿದರು.
ಕನ್ನಡ ನೆಲ ಜಲದ ಅಭಿಯಾನ ಕುರಿತು ಉಪನ್ಯಾಸ ನೀಡಿದ ಇತಿಹಾಸ ಅನುಸಂಧಾನ ಪರಿಷತ್ ಉಪನಿರ್ದೇಶಕ ಎಸ್.ಕೆ. ಅರುಣಿ, ರಾಜ್ಯದಲ್ಲಿ ಇತಿಹಾಸ ಬರೆಯಲು ಹೊರಟರೆ ಹೈದ್ರಾಬಾದ್-ಕರ್ನಾಟಕದ ಬಗ್ಗೆಯೂ ಸಹ ಬರೆಯಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಇತಿಹಾಸಕ್ಕೆ ಈ ಭಾಗದ ಕೊಡುಗೆ ಇದೆ ಎಂದು ತಿಳಿಸಿದರು.
ಸೂಫಿ ಸಂತರ ನಾಡು: ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಸೂಫಿ ಸಾಹಿತ್ಯಕ್ಕೂ ಕೂಡ ಹೈಕ ಭಾಗ ಅಪಾರ ಕೊಡುಗೆ ನೀಡಿದೆ. ಇದರಿಂದಾಗಿಯೇ ಇದನ್ನು ಸೂಫಿ ಸಂತರ ನಾಡು ಎಂದೂ ಕರೆಯಲಾಗುತ್ತಿದೆ. ಅತ್ಯಂತ ಹಳೆಯ ಮಾನವರು ಕೂಡ ಹುಣಸಗಿ ಮತ್ತು ಇಸ್ಲಾಂಪುರದಲ್ಲಿ ನೆಲೆಸಿದ್ದರು ಎಂಬುದು ಇತಿಹಾಸ ಹೇಳುತ್ತಿದೆ. ಕನ್ನಡ ನೆಲ, ಜಲ ಹಾಗೂ ಭಾಷೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕಿದೆ. ಆಗಲೇ ನಾವು ನಾಡಿನಲ್ಲಿ ಜನಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ರಾಮಾಂಜನೇಯ, ವಿಜ್ಞಾನ ಯುಗದಲ್ಲಿ ಮಾನವೀಯತೆ ನಿರೀಕ್ಷೆಗೂ ಮೀರಿ ಮರೆಯಾಗುತ್ತಿದೆ. ಒತ್ತಡದ ಬದುಕಿನ ಜಂಜಾಟಕ್ಕೆ ಒಳಗಾಗಿ ಮನುಷ್ಯರು ತಮ್ಮತನ ಮರೆಯುತ್ತಿದ್ದಾರೆ. ಅದಕ್ಕಾಗಿ ಮಾನವೀಯ ಗುಣಗಳು ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದತ್ತಿ ದಾನಿಯಾಗಿರುವ ಜಿಪಂ ಮಾಜಿ ಸದಸ್ಯ ಖಂಡಪ್ಪ ದಾಸನ್ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ನೋಡುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ವಲಯವಾರು ಆಯೋಜಿಸಲಾಗುತ್ತಿದೆ ಎಂದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಸುಭಾಶ್ಚಂದ್ರ ಕೌಲಗಿ, ಜಗದೀಶ್ವರಿ, ಬಸವರಾಜ ಮೋಟ್ನಳ್ಳಿ, ಪ್ರಕಾಶ ಅಂಗಡಿ, ಶ್ರೀನಿವಾಸ ಕರ್ಲಿ ಇತರರಿದ್ದರು.