ಬಿಜೆಪಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದಕ್ಕೆ
ಯಾದಗಿರಿ: ಬಿಜೆಪಿ ಜಿಲ್ಲಾ ಘಟಕಕ್ಕೆ ಅಧ್ಯಕ್ಷರ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಮುಂಡೂಡಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಭಾನವಾರ ನಡೆದ ಸಭೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ ಮಲ್ಕಾಪುರೆ, ಎಚ್ಕೆಡಿಬಿ ಮಾಡಿ ಅಧ್ಯಕ್ಷ ಮಹಾಂತಗೌಡ ಪಾಟೀಲ, ನಂಜುಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಶಿ ಆಗಮಿಸಿ ಜಿಲ್ಲಾ ಮುಖಂಡರೊಂದಿಗೆ ಚರ್ಚಿಸಿದರು.
ಮೂಡದ ಒಮ್ಮತ: ಜಿಲ್ಲಾಧ್ಯಕ್ಷ ಸ್ಥಾನಕ್ಕೆ 10 ಜನ ಆಕಾಂಕ್ಷಿಗಳಿದ್ದು, ಯಾರೊಬ್ಬರ ಬಗ್ಗೆಯೂ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಆದ್ದರಿಂದ ಹಾಲಿ ಅಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ ಅವರನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು. ಆಕಾಂಕ್ಷಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರಕ್ರಿಯೆ ಮುಂದೂಡುವುದಿದ್ದರೆ ಸಭೆ ಕರೆದದ್ದು ಯಾಕೆ ಎಂದು ಪ್ರಶ್ನಿಸಿದರು.
ಸದ್ಯ ಹಾಲಿ ಅಧ್ಯಕ್ಷರ ಮುಂದುವರಿಕೆ: ಆಕಾಂಕ್ಷಿಗಳ ಪೈಕಿ ಒಬ್ಬರ ಹೆಸರನ್ನು ಅಂತಿಮಗೊಳಿಸುವಂತೆ ಪಟ್ಟು ಹಿಡಿದರು. ಆದರೆ ಯಾರ ಹೆಸರನ್ನೂ ಅಂತಿಮಗೊಳಿಸುವಲ್ಲಿ ನಾಯಕರು ವಿಫಲರಾದರು. ಆದ್ದರಿಂದ ರಾಜ್ಯ ನಾಯಕರ ಗಮನಕ್ಕೆ ವಿಷಯವನ್ನು ತಂದು, ನಂತರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಅಲ್ಲಿಯವರೆಗೆ ಹಾಲಿ ಅಧ್ಯಕ್ಷರೇ ಮುಂದುವರಿಯಲಿದ್ದಾರೆ ಎಂದು ನಾಯಕರು ತಿಳಿಸಿದರು.
29 ಜನ ಆಯ್ಕೆ
ಸುರಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2013-18ರ ಅವಧಿಗಾಗಿ ತಾಲೂಕು ಘಟಕದ 35 ಪದಾಧಿಕಾರಿಗಳ ಸ್ಥಾನಗಳಿಗೆ ನಡೆವ ಚುನಾವಣೆಗೆ ಈಗಾಗಲೇ 29 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆಯಾದವರು- ಶರಣಪ್ಪ ಗುಮ್ಮಾ ತಿಮ್ಮಾಪುರ(ಕೃಷಿ ಇಲಾಖೆ), ಅಲ್ಲಾಹುದ್ದೀನ್ ತಿರಂದಾಜ್ (ಪಶುಸಂಗೋಪನೆ), ಬಸಪ್ಪ ಯಕ್ಕರನಾಳ (ಮೀನುಗಾರಿಕೆ, ವಾಣಿಜ್ಯ ತೆರಿಗೆ), ಗೀತಾ ಪತ್ತಾರ(ಸಾಂಖ್ಯಿಕ ಹಾಗೂ ಆಹಾರ ಇಲಾಖೆ), ಹಣಮಂತ, ಗುರುಬಸಪ್ಪ(ಕಂದಾಯ), ಬಸವರಾಜ, ಚಂದ್ರಕಾಂತರಾವ್, ದತ್ತಾತ್ರೇಯ, ಬಸವರಾಜ, ಬೈಲಪ್ಪ(ಲೋಕೋಪಯೋಗಿ ಮತ್ತು ನೀರಾವರಿ). ಸಂಜೀವಪ್ಪ(ಪ್ರೌಢಶಾಲೆ ವಿಭಾಗ), ಸೈಯದ್ ರಸೂಲ್ ಮುಲ್ಲಾ, ಬಸವರಾಜ ಸಜ್ಜನ್, (ಸಮಾಜಕಲ್ಯಾಣ), ಮೋನಪ್ಪ(ಅರಣ್ಯ), ಜಿ.ನಾಗರಾಜ(ನಗರ ಯೋಜನಾ, ಕಾನೂನು ಮಾಪನ ಶಾಸ್ತ್ರ), ಸಿ.ಗುರುನಾಥ ದೊರೆ, ಮಹ್ಮದ್ ಇಲಿಯಾಸ್, ಬಸವರಾಜ, ಸೋಮಪ್ಪ(ಆರೋಗ್ಯ ಕುಟುಂಬ ಕಲ್ಯಾಣ), ಭಾರತಿ (ಅಬಕಾರಿ, ಕಾರ್ಮಿಕ ಇಲಾಖೆ), ಶ್ರೀಶೈಲ ವಾಗ್ಮೋರೆ(ತೋಟಗಾರಿಕೆ, ರೇಷ್ಮೆ ಇಲಾಖೆ), ಮಂಗಲಕುಮಾರ ಗುಡುಗುಂಟಿ(ಖಜಾನೆ), ಮಾನಪ್ಪ(ಭೂಮಾಪನ ನೋಂದಣಿ ಮತ್ತು ಮುದ್ರಾಂಕ ಇಲಾಖೆ), ರಂಗನಾಥ(ಎಪಿಎಂಸಿ), ರಾಮಣ್ಣ(ನ್ಯಾಯಾಂಗ) ಮಹಾದೇವಿ(ತಾಪಂ), ಲಕ್ಷ್ಮೀ ಲಮಾಣಿ (ಸಿಡಿಪಿಒ).