ಸಂಘದ ಸದ್ಬಳಕೆಗೆ ಮಾಲಕರೆಡ್ಡಿ ಸಲಹೆ
ಯಾದಗಿರಿ: ಇಲ್ಲಿನ ಬಸ್ ತಯಾರಿಕಾ ಘಟಕದ ಪ್ರಾದೇಶಿಕ ಕಾರ್ಯಾಗಾರದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಯಾದಗಿರಿ ವಿಭಾಗದ ಉಪ ಕಚೇರಿಯನ್ನು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಇತ್ತೀಚೆಗೆ ಉದ್ಘಾಟಿಸಿದರು. ನಂತರ ಮಾತನಾಡಿ, ಅನೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಸದುಪಯೋಗವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಾರಿಗೆ ನೌಕರರಿಗೆ ಪತ್ತಿನ ಸಹಕಾರ ಸಂಘದ ಅವಶ್ಯಕತೆ ಇದೆ. ಈ ಸಂಘಕ್ಕೆ ಅಧಿಕಾರಿಗಳು ಸೇರಿದಂತೆ ಎಲ್ಲ ನೌಕರರು ಕಡ್ಡಾಯವಾಗಿ ಸದಸ್ಯರಾಗಿ ಲಾಭ ಪಡೆಯಬೇಕು ಎಂದರು. ಸೊಪ್ಪಿ ಬಸವೇಶ್ವರ ಮಠದ ಚೆನ್ನವೀರ ದೇವರು ಸಾನ್ನಿಧ್ಯ ವಹಿಸಿದ್ದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಚ್. ಸಂತೋಷಕುಮಾರ, ಸಂಘದ ಅಧ್ಯಕ್ಷ ಎಸ್.ಎಸ್. ಕಮಠಾಣವರ, ಉಪಾಧ್ಯಕ್ಷ ದೇವರಾಜ, ಎಸ್.ಕೆ. ಪವಾರ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.
ನಗರದಲ್ಲಿ ಬೀದಿದೀಪ
ಅಳವಡಿಸಲು ಆಗ್ರಹ
ಯಾದಗಿರಿ: ನಗರದ ಸ್ಟೇಷನ್ ಏರಿಯಾದ ಶಿವನಗರದಲ್ಲಿ ಬೀದಿ ದೀಪಗಳು ಇಲ್ಲದ ಹಿನ್ನೆಲೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ನಗರಸಭೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬೀದಿ ದೀಪ ಅಳವಡಿಸಬೇಕು ಎಂದು ಕೋಲಿ ಸಮಾಜ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಒಂದು ನ್ಯಾಯಬೆಲೆ ಅಂಗಡಿ ಮತ್ತು ಮನೆಯಲ್ಲಿ ಕಳ್ಳತನವಾಗಿದೆ. ಇದರಿಂದಾಗಿ ರಾತ್ರಿ ವೇಳೆ ನಿವಾಸಿಗಳು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಕಳ್ಳತನ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಮುಂದೆ ಇಂಥ ಅನಾಹುತ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ನಗರಸಭೆ ಶಿವನಗರದ ವಾರ್ಡ್ ಸೇರಿದಂತೆ ಅಗತ್ಯವಿರುವಲ್ಲಿ ಬೀದಿ ದೀಪ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಾತಿ ಪ್ರಮಾಣ ಪತ್ರದಲ್ಲಿ ದೋಷ: ಕ್ರಮಕ್ಕೆ ಆಗ್ರಹ
ಯಾದಗಿರಿ: ತಾಲೂಕಿನ ಸೈದಾಪುರ ವಲಯದ ಕಡೇಚೂರ ಗ್ರಾಮದ ಶಶಿಕಲಾ ಎಂಬ ವಿದ್ಯಾರ್ಥಿನಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಕಂದಾಯ ಅಧಿಕಾರಿಗಳು ತಪ್ಪೆಸಗಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿ ಪಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ದೂರಿದ್ದಾರೆ. ವಿದ್ಯಾರ್ಥಿನಿಯು ಉಪ್ಪಾರ ಜಾತಿ ವರ್ಗಕ್ಕೆ ಸೇರಿದ್ದು, ವಿದ್ಯಾಭ್ಯಾಸಕ್ಕಾಗಿ ಸೈದಾಪುರದ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಕಬ್ಬಲಿಗ ಜಾತಿಗೆ ಸೇರಿದರಾಗಿದ್ದಾರೆಂದು ಪ್ರಮಾಣ ಪತ್ರ ನೀಡಿದ್ದಾರೆ. ಇದರಿಂದ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಕಾರಣ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗುತ್ತೇವೆ ಎಂದು ಪಾಲಕ ಮಹಾದೇವಪ್ಪ ಕಡೇಚೂರ ಎಚ್ಚರಿಸಿದ್ದಾರೆ.