ಸಮಸ್ಯೆಗೆ ಸ್ಪಂದಿಸದ ನಾಯನೋರ: ರಂಜೋಳ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.21
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಸ್ಪರ್ಧಿಸಿರುವ ಕಿಶೋರಕುಮಾರ್ ನಾಯನೋರ ಈ ಹಿಂದೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಶಿಕ್ಷಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪ್ರತಿಸ್ಪರ್ಧಿ ಜಗನ್ನಾಥರೆಡ್ಡಿ ರಂಜೋಳ ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಜು.22ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅವರು ಶನಿವಾರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತು ಮುಖ್ಯಗುರುಗಳಿಗೆ ಮತಯಾಚಿಸಿ ಮಾತನಾಡಿದರು.
ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಸ್ಪರ್ಧಿಸಿರುವ ಕಿಶೋರಕುಮಾರ್ ನಾಯನೋರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದು, ಶಿಕ್ಷಕರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಚುನಾಯಿತರಾಗಿ ಇಲ್ಲಿಯವರೆಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇವರ ಕಿರುಕುಳದಿಂದಾಗಿ ತಾಲೂಕಿನ ಕಲ್ಲೂರರೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ಇನ್ನು ಜೀವಂತವಾಗಿದೆ ಎಂದರು.
ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಡ್ಯೂವೆಲ್ ಡೆಸ್ಕ್ ಖರೀದಿ, ಸರ್ಕಾರಿ ಶಾಲೆಗಳಲ್ಲಿ ಬೋರ್‌ವೆಲ್ ಕೊರೆಸುವಲ್ಲಿ ಮತ್ತು ಮಕ್ಕಳಿಗೆ ಶಾಲಾ ಬ್ಯಾಗ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುರೇಶ ಕೊರವಿ, ರೇವಣಸಿದ್ದಯ್ಯ ನರನಾಳ, ಯೂಸುಫ ಅಲಿ, ಮಲ್ಲಿಕಾರ್ಜುನ ಪಾಲಾಮೂರ್, ರಾಮಕೃಷ್ಣ, ವೇಣುಗೋಪಾಲಗೌಡ ಇದ್ದರು.