ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲು ಒತ್ತಾಯ
ಚಿತ್ತಾಪುರ: ಇತ್ತೀಚಿಗೆ ತಾಲೂಕಿನ ಯಾಗಪುರ ಗ್ರಾಪಂ ವ್ಯಾಪ್ತಿಯ ಪತ್ತು ನಾಯಕ ತಾಂಡಾದ ಜನರು ಚಿತ್ತಾಪುರಕ್ಕೆ ಪಡಿತರ ಚೀಟಿಯ ಪೋಟೋ ತೆಗೆಸಲು ಹೋಗಿ ವಾಪಸು ಬರುವಾಗ ನಾಲವಾರ ಬಳಿ ಅಪಘಾತದಲ್ಲಿ ಮೃತ ಪಟ್ಟ ಕುಟುಂಬದವರಿಗೆ # 5 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಮುಖ್ಯ ಮಂತ್ರಿಗೆ ಒತ್ತಾಯಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಪಡಿತರ ಚೀಟಿ ಪೋಟೋ ತೆಗೆಯುವುದು ಹೆಸರು ನೊಂದಾಯಿಸುವುದು, ಸೇರಿಸುವುದು, ಕಾರ್ಡ್ ವಿತರಿಸುವ ಜವಾಬ್ದಾರಿ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗೆ ನೀಡಿದೆ. ಆದರೆ ಗ್ರಾಪಂ ಕಂಪ್ಯೂಟರ್ ಆಪರೇಟರ್‌ಗಳು ಗ್ರಾಪಂನಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದ ಗ್ರಾಮದ ಜನತೆ ತಹಸೀಲ್ದಾರ್ ಕಚೇರಿಗೆ ಹಾಗೂ ಖಾಸಗಿ ಕಂಪ್ಯೂಟರ್ ಕೇಂದ್ರಗಳಿಗೆ ಹೊಗಿ ವಾಪಸು ಬರುವಾಗ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಇವರ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಿಸುವುದು ಕಾರ್ಯಾರಂಭವಾಗಬೇಕು. ಅಪಘಾತದಲ್ಲಿ ಗಾಯಗೊಂಡ ರೋಗಿಗಳಿಗೆ ಸರ್ಕಾರದಿಂದ ಚಿಕ್ಸಿತ್ಸೆ ನೀಡಬೇಕು. ಒಂದು ವಾರದೊಳಗೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶಂಕರ ಚವ್ಹಾಣ, ಪುರಸಭೆ ಸದಸ್ಯ ರಾಮದಾಸ ಚವ್ಹಾಣ, ಮಲ್ಲಿಕಾರ್ಜುನ ಎಮ್ಮನೊರ, ತಮ್ಮಣ್ಣ ಡಿಗ್ಗಿ, ಅಶೋಕ ಸೂರ್ಯವಂಶಿ ಇದ್ದರು.
--