ರನ್ ವೇನಲ್ಲೇ ನಿಂತ ಕಾಮಗಾರಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.22
ದೇಶದ ಪ್ರಾದೇಶಿಕ ವಿಮಾನ ನಿಲ್ದಾಣ ಜಾಲಕ್ಕೆ ಮುನ್ನುಡಿ ಬರೆಯಬೇಕಿದ್ದ ಗುಲ್ಬರ್ಗ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗಳಿಗೆ ಗುತ್ತಿಗೆದಾರ ಸಂಸ್ಥೆಗಳ ಒಳಜಗಳದಿಂದಾಗಿ ಗ್ರಹಣ ಅಮರಿದೆ. ಇದರೊಂದಿಗೆ ಈ ಹಣಕಾಸು ವರ್ಷಾಂತ್ಯಕ್ಕೆ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ್ದ ಬಜೆಟ್ನಲ್ಲಿ ನೀಡಿರುವ ಹೇಳಿಕೆ ಹುಸಿಯಾಗಲಿದೆ.
ಏಕೆಂದರೆ ಪ್ರತಿಶತ 50ರ ಆಸುಪಾಸಿನಲ್ಲೇ ಕಾಮಗಾರಿ ಸಾಗಿರುವ ಉಭಯ ಯೋಜನೆಗಳಲ್ಲಿ ಹೆಚ್ಚುಕಮ್ಮಿ ಕಳೆದೊಂದು ವರ್ಷದಿಂದ ಕಾಮಗಾರಿಗಳೆಲ್ಲವೂ ಸ್ಥಗಿತಗೊಂಡಿವೆ. ಈ ಬೆಳವಣಿಗೆಯಿಂದಾಗಿ ದೇಶದಲ್ಲಿ ಅಭಿವೃದ್ಧಿಗೊಳ್ಳಬೇಕಿದ್ದ ಪ್ರಾದೇಶಿಕ ವಿಮಾನ ನಿಲ್ದಾಣ ಜಾಲ ಯೋಜನೆಗೂ ತೀವ್ರ ಹಿನ್ನಡೆಯಾಗಿದೆ.
ರಾಹಿ ಏವಿಯೇಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್(ಆರ್ಎಎಚ್) ಮತ್ತು ಐಎಲ್ ಆ್ಯಂಡ್ ಎಫ್ಎಸ್ ಟ್ರಾನ್ಸ್ಪೋರ್ಟೇಶನ್ ಲಿಮಿಟೆಡ್(ಐಟಿಎನ್ಎಲ್) ಸಹಭಾಗಿತ್ವದಡಿಯಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.
ಸರ್ಕಾರಿ- ಖಾಸಗಿ ಸಹಭಾಗಿತ್ವ: ಆಂಧ್ರಪ್ರದೇಶದ ಸತ್ಯಂ ಸಂಸ್ಥೆ ಪತನಾನಂತರ ಕರ್ನಾಟಕ ಸರ್ಕಾರ- ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಿತ್ತು. 2010ರ ಫೆ.18ರಂದು ಈ ಸಂಬಂಧ ಆದೇಶ ಹೊರಡಿಸಿ ವಿಮಾನ ನಿಲ್ದಾಣ ಅಭಿವೃದ್ಧಿ, ಹಣಕಾಸು ಮತ್ತು ನಿರ್ಮಾಣದ ಮುಂದಾಳತ್ವವನ್ನು ರಾಹಿಗೆ ವಹಿಸಿತ್ತು. ಆರ್ಎಎಚ್ ಮತ್ತು ಐಟಿಎನ್ಎಲ್ ಸಂಸ್ಥೆಗಳು ಷೇರು ಚಂದಾ ಒಪ್ಪಂದಕ್ಕೆ 2010ರ ಮಾರ್ಚ್ 12ರಂದು ಸಹಿ ಹಾಕಿದ್ದಲ್ಲದೆ 60-40ರ ಅನುಪಾತದಲ್ಲಿ ಷೇರುಗಳನ್ನು ವಿಭಜಿಸುವಂತೆ ಒಪ್ಪಿಕೊಂಡಿದ್ದವು.
ಉಭಯ ಯೋಜನೆಗಳ ರಿಯಾಯ್ತಿ ಅವಧಿಯನ್ನಾಗಿ 30 ವರ್ಷ ನಿಗದಿಪಡಿಸಲಾಗಿತ್ತು. ಅಲ್ಲದೇ ಇದನ್ನು ಹೆಚ್ಚುವರಿಯಾಗಿ 30 ವರ್ಷಗಳಿಗೆ ವಿಸ್ತರಿಸಲು ಒಪ್ಪಂದದಲ್ಲಿ ಅವಕಾಶವನ್ನೂ ಕಲ್ಪಿಸಲಾಗಿತ್ತು.
ಗುಲ್ಬರ್ಗ ಯೋಜನೆಯ ಮೂರನೇ ಎರಡರಷ್ಟು ಹಾಗೂ ಶಿವಮೊಗ್ಗ ಯೋಜನೆಯ ಬಹುತೇಕ ಮೂರರಷ್ಟು ಪಾಲು ಕೆಲಸವನ್ನು ಪೂರ್ಣಗೊಳಿಸಲು ರಾಹಿ 2011ರ ಡಿಸೆಂಬರ್ರವರೆಗೂ ಸತತ ಕಾರ್ಯನಿರ್ವಹಿಸಿದೆ. ಆದರೆ ಆ ಬಳಿಕ ರಾಹಿಯ ಎರಡು ಪ್ರವರ್ತಕ ಸಂಸ್ಥೆಗಳ ನಡುವೆ ಗಂಭೀರ ಭಿನ್ನಾಭಿಪ್ರಾಯ ತಲೆದೋರಿ ಯೋಜನೆಗಳು ಸ್ಥಗಿತಗೊಂಡಿವೆ.
ರನ್ವೇನಲ್ಲೇ ನಿಂತ ಕಾಮಗಾರಿ: ಒಪ್ಪಂದದ ಪ್ರಕಾರ 2012ರ ಮೇ.22ರಂದೇ ಉಭಯ ಯೋಜನೆಗಳು ಪೂರ್ಣಗೊಳ್ಳಬೇಕಿತ್ತು, ರಾಹಿ ಮನವಿಯಂತೆ ಸರ್ಕಾರ 2012ರ ಡಿಸೆಂಬರ್ವರೆಗೂ ಡೆಡ್ಲೈನ್ ವಿಸ್ತರಣೆಗೂ ಒಪ್ಪಿಗೆ ನೀಡಿ ಆದೇಶಿಸಿತ್ತು. ಇಷ್ಟಾದರೂ ಗುತ್ತಿಗೆದಾರ ಸಂಸ್ಥೆಗಳ ಒಳಜಗಳದಿಂದಾಗಿ ಕಳೆದೊಂದೂವರೆ ವರ್ಷದಿಂದ ಕಾಮಗಾರಿಗಳೆಲ್ಲವೂ ಸ್ಥಗಿತಗೊಂಡಿದ್ದು ಮಹತ್ವಾಕಾಂಕ್ಷಿ ಯೋಜನೆಗಳೆರಡೂ ಮೂಲೆಗುಂಪಾಗಿವೆ.
ಗುಲ್ಬರ್ಗದಲ್ಲಿ 2.5 ಕಿ.ಮೀ. ಉದ್ದದ ರನ್ವೇ ಪೈಕಿ 2 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ, ಶಿವಮೊಗ್ಗದಲ್ಲೂ ಹೆಚ್ಚು ಕಡಿಮೆ ಕಾಮಗಾರಿ ಇದೇ ಹಂತದಲ್ಲಿದೆ. 1ನೇ ಹಂತದ ಯೋಜನೆಗೆ 175 ಕೋಟಿ ನಿಗದಿಯಾಗಿದ್ದು, ಇದರಲ್ಲಿ ಏಟಿಸಿ(ಏರ್ ಟರ್ಮಿನಲ್ ಸೆಂಟರ್), ಮುಖ್ಯ ಪ್ರಾಂಗಣ, ವಿಮಾನಗಳ ನಿಲುಗಡೆ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಜಗಳದಿಂದಾಗಿ ರನ್ವೇ, ಏಪ್ರಾನ್, ಟ್ಯಾಕ್ಸಿ ವೇ, ಟರ್ಮಿನಲ್ ಬಿಲ್ಡಿಂಗ್ ಸೇರಿದಂತೆ ಯಾವ ಕಟ್ಟಡ ಕಾಮಗಾರಿಗಳೂ ಶೇ.50 ಮೀರಿ ಪ್ರಗತಿ ಕಂಡಿಲ್ಲ.
ಈ ವಿಶಿಷ್ಟ ಯೋಜನೆಗಳು ಕರ್ನಾಟಕ ಸರ್ಕಾರ ಮತ್ತು ಬ್ಯಾಂಕರ್ಗಳು ನೀಡಿದ್ದ ಬೆಂಬಲದಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿತ್ತು. ಆದರೆ ಪೂರ್ಣಪ್ರಮಾಣದ ನಿಲ್ದಾಣಗಳನ್ನು ಆದಷ್ಟು ಬೇಗ ಹೊಂದುವುದಲ್ಲದೆ ಲೋಹದ ಹಕ್ಕಿಗಳು ತಮ್ಮೂರಿನಿಂದಲೇ ಹಾರುವ ನೋಟ ನೋಡುವ ಗುಲ್ಬರ್ಗ ಹಾಗೂ ಶಿವಮೊಗ್ಗ ನಗರವಾಸಿಗಳ ಕನಸು ಮಾತ್ರ ಗುತ್ತಿಗೆದಾರ ಕಂಪನಿಗಳ ಜಗಳದಿಂದ ನನಸಾಗದಂತಾಗಿದೆ.
ಗುಲ್ಬರ್ಗದಲ್ಲಿ ಶೇ.74 ಮತ್ತು ಶಿವಮೊಗ್ಗದಲ್ಲಿ ಶೇ.32ರಷ್ಟು ಕಾಮಗಾರಿ ಪೂರ್ಣಗೊಂಡಿರುವ ಸಂದರ್ಭದಲ್ಲಿ ರಾಹಿ ಮತ್ತು ಅದರ ಪ್ರವರ್ತಕ ಸಂಸ್ಥೆಗಳ ಮಧ್ಯೆ ಭಿನ್ನಾಭಿಪ್ರಾಯ ಮೊಳಕೆ ಕಂಡು ನಿರ್ಮಾಣವಾಗಿರುವ ತ್ರಿಶಂಕು ಸ್ಥಿತಿ ಮಹತ್ವಾಕಾಂಕ್ಷಿ ಯೋಜನೆಗಳಿಗೇ ಮುಳುವಾಗಿದೆ.
ಕಾನೂನು ಕ್ರಮಕ್ಕೆ ಮುಂದಾದ ರಾಹಿ
ಪ್ರಾದೇಶಿಕ ವಿಮಾನ ನಿಲ್ದಾಣ ಯೋಜನೆ ಹೆಣೆದಿರುವ ರಾಹಿ ಪ್ರವರ್ತಕ ಸಂಸ್ಥೆಯು ಐಟಿಎನ್ಎಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. 2012ರ ಫೆಬ್ರವರಿಯಿಂದ ಸಭೆಗಳಲ್ಲಿ ಭಾಗವಹಿಸಲು ಐಟಿಎನ್ಎಲ್ ನಿರಾಕರಿಸಿದೆ. ಆ ಮೂಲಕ ಯೋಜನೆ ಪೂರ್ಣಗೊಳಿಸಲು ಅಗತ್ಯ ಬಂಡವಾಳ ಕ್ರೂಢೀಕರಣದ ರಾಹಿ ಯತ್ನಗಳಿಗೆ ಅಡೆತಡೆ ಒಡ್ಡಿದೆ. ತನ್ನ ಸಂಬಂಧಗಳನ್ನು ಬಳಸಿಕೊಂಡು ಯೋಜನೆಗಳಿಗೆ ಸಾಲದ ಅಂತಿಮ ಅನುಮೋದನೆ ತಡೆಹಿಡಿಯುವಂತೆ ಮಾಡಲಾಗಿದೆ. ತನ್ನ ಸಹಸಂಸ್ಥೆ ಐಇಸಿಸಿಎಲ್ ಜೊತೆ ಕೈಜೋಡಿಸಿ ಅನೇಕ ಅಡಚಣೆ ಹುಟ್ಟುಹಾಕುತ್ತಿದೆ. ಇವೆಲ್ಲ ಬೆಳವಣಿಗೆಗಳಿಂದಾಗಿ ಗುಲ್ಬರ್ಗ ಯೋಜನೆ ಲಾಭವಿಲ್ಲದ ಸಂಪತ್ತು(ಎನ್ಪಿಎ) ಆಗಿ ಪರಿವರ್ತಿತವಾಗಿದೆ. ಇದರ ಕ್ರೆಡಿಟ್ ರೇಟಿಂಗ್ ಸಹ ಡಿಫಾಲ್ಟ್ ಗ್ರೇಡ್ ಡಿಗೆ ಇಳಿಸಲಾಗಿದೆ. ಗುಲ್ಬರ್ಗ ಯೋಜನೆಯನ್ನು ಐಟಿಎನ್ಎಲ್ ತನ್ನ ವಶಕ್ಕೆ ಪಡೆಯುವ ಯತ್ನದಲ್ಲಿದೆ. ತನ್ನ ತಪ್ಪುಗಳನ್ನೇ ಲಾಭಕ್ಕೆ ಬಳಸಿಕೊಳ್ಳುವ ಪ್ರವರ್ತಕ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧರಿಸಿದ್ದೇವೆ.
- ಉಮೇಶಕುಮಾರ್ ಬವೇಜಾ, ಅಧ್ಯಕ್ಷರು,
ರಾಹಿ ಏವಿಯೇಷನ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್
ಸರ್ಕಾರದ ಕ್ರಮವೇನು?
ಸತ್ಯಂ ಕಂಪನಿ ಪತನಾನಂತರ ಬೇಗ ಯೋಜನೆ ಕೈಗೂಡುವಂತಾಗುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಗೆ ನೀಡಿದ್ದರೂ ಈ ರೀತಿ ಯೋಜನೆ ಹಳಿತಪ್ಪಿರುವುದರಿಂದ ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದೇ ಈಗಿನ ಪ್ರಶ್ನೆ. ಒಪ್ಪಂದದಂತೆ ಅಂತಿಮ ಗಡುವು ಮೀರಿದ್ದು ಮುಂದೇನು?, ನೆನೆಗುದಿಗೆ ಬಿದ್ದಿರುವ ಈ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರದ ಕ್ರಮಗಳೇನು? ಎಂಬುದೇ ಈಗಿನ ಕುತೂಹಲ.
ಗುಲ್ಬರ್ಗ- ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತ
1) ಗುಲ್ಬರ್ಗ ವಿಮಾನ ನಿಲ್ದಾಣಕ್ಕೆಂದು ಶ್ರೀನಿವಾಸ ಸರಡಗಿ ಹತ್ತಿರ ಸರ್ಕಾರ ವಶಪಡಿಸಿಕೊಂಡಿರುವ 692 ಎಕರೆ ಭೂಮಿಯನ್ನು ರಾಹಿಗೆ ವಹಿಸಿಕೊಡಲಾಗಿದೆ. ಇದರಲ್ಲಿ ಕೇವಲ 350 ಎಕರೆಯಲ್ಲೇ ವಿಮಾನ ನಿಲ್ದಾಣ ಕಾಮಗಾರಿಗಳು ನಡೆಸಲಾಗುತ್ತಿದೆ. ಉಳಿದಂತೆ 348 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
2) ಗುಲ್ಬರ್ಗ ಯೋಜನೆಯಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 186.33 ಕೋಟಿ ವೆಚ್ಚದ ಯೋಜನೆಯಲ್ಲಿ ಇದುವರೆಗೂ 120 ಕೋಟಿ ವೆಚ್ಚವಾಗಿದೆ.
3) ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿಯಲ್ಲಿ ಶೇ.40ರಷ್ಟು ಪೂರ್ಣಗೊಂಡಿದೆ. 194.04 ಕೋಟಿ ಯೋಜನೆಯಲ್ಲಿ ಇದುವರೆಗೂ 36.48 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ.
4) ಒಪ್ಪಂದದಂತೆ ಗುಲ್ಬರ್ಗ ನಿಲ್ದಾಣವನ್ನು 2013ರ ಮೇ ಹಾಗೂ ಶಿವಮೊಗ್ಗ ನಿಲ್ದಾಣವನ್ನು 2013ರ ಡಿಸೆಂಬರ್ನಲ್ಲಿ ಪೂರ್ಣಗೊಳಿಸಬೇಕಿತ್ತು. ದುರಂತವೆಂದರೆ ಎರಡೂ ಯೋಜನೆಗಳು ತಮಗೆ ನಿಗದಿಯಾಗಿದ್ದ ಅಂತಿಮ ಗಡುವು ಮೀರಿವೆ.
5) ಗುತ್ತಿಗೆದಾರರ ಜಗಳ ಬಗೆಹರಿದು ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ಇನ್ನು 3 ತಿಂಗಳಲ್ಲಿ ಗುಲ್ಬರ್ಗದ್ದು ಹಾಗೂ ಇನ್ನು 9 ತಿಂಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗಳನ್ನು ಪೂರ್ಣಗೊಳಿಸಬಹುದಾಗಿದೆ.
-ಶೇಷಮೂರ್ತಿ ಅವಧಾನಿ