'ಹೇಳತೇನ ಕೇಳಾ' ವಿಶೇಷ ಕಾರ್ಯಕ್ರಮ
ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ, ನಾಟಕಕಾರ, ನಾಡೋಜ ಡಾ.ಚಂದ್ರಶೇಖರ ಕಂಬಾರ ಅವರ 'ಹೇಳತೇನ ಕೇಳಾ' ಎಂಬ ವಿಶೇಷ ಕಾರ್ಯಕ್ರಮವನ್ನು ಜು.27ರಂದು ಸಂಜೆ 4ರಿಂದ 6ರವರೆಗೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕಂಬಾರ ಬರೆದ ನೂರಾರು ಜನಪ್ರಿಯ ಹಾಡು ಹಾಡುವ ಕಾರ್ಯಕ್ರಮ, ಜತೆಗೆ ಆ ಸಂದರ್ಭದಲ್ಲಿ ಗಾಯನಕ್ಕೆ ತಕ್ಕಂತೆ ಚಿತ್ರ ರಚಿಸುವ ಕಾರ್ಯಕ್ರಮ ನಡೆಯಲಿದೆ.
ಸ್ಥಳೀಯ ಪ್ರತಿಭೆಗಳಾದ ಗೋಪಿ ನಾಲವಾರ, ಭಾರತಿ ಸಾಲಿಮಠ, ಚಾಮರಾಜ ದೊಡ್ಡಮನಿ, ಲಕ್ಷ್ಮೀ ಶಂಕರ ಜೋಶಿ, ರಾಜಶೇಖರ ಮಾಂಗ, ಸಿ.ಎಸ್. ಮಾಲಿಪಾಟೀಲ್ ಅವರಿಂದ ಗಾನ ವೈಭವ ನಡೆಯಲಿದೆ. ಸಂವಾದದಲ್ಲಿ ಪ್ರತಿಯೊಬ್ಬರ ಪ್ರಶ್ನೆಗಳಿಗೆ ಡಾ. ಕಂಬಾರ ಸ್ಪಂದಿಸಿ ಮಾತನಾಡುವರು.